ಶಿವಮೊಗ್ಗ: ಹುಣಸೋಡು ಕಲ್ಲು ಕ್ವಾರಿ ಸ್ಫೋಟದಿಂದ ಹಾನಿಗೊಳಗಾಗಿರುವ ಮನೆಗಳಿಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ನವಕರ್ನಾಟಕ ನಿರ್ಮಾಣ ವೇದಿಕೆ ನೇತೃತ್ವದಲ್ಲಿ ಹುಣಸೋಡು ಗ್ರಾಮಸ್ಥರು ಉಪವಾಸ ಸತ್ಯಾಗ್ರಹ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಗ್ರಾಮಸ್ಥರು, ಹುಣಸೋಡು ಕಲ್ಲುಕ್ವಾರಿ ಸ್ಫೋಟದಲ್ಲಿ 6 ಮಂದಿ ಸಾವನ್ನಪ್ಪಿ, ಅನೇಕ ಮನೆಗಳು ಹಾನಿಗೀಡಾಗಿದ್ದವು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೂವರೆ ತಿಂಗಳು ಕಳೆದರೂ ಸಹ ಸ್ಫೋಟದ ತೀವ್ರತೆಗೆ ಹಾನಿಗೀಡಾಗಿದ್ದ ಮನೆಗಳಿಗೆ ಸರ್ಕಾರ ಯಾವುದೇ ಪರಿಹಾರ ನೀಡಿಲ್ಲ ಹಾಗೂ ಅಧಿಕಾರಿಗಳು ಸಹ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ ಎಂದು ದೂರಿದರು.
ಸ್ಫೋಟದ ತೀವ್ರತೆಗೆ ಗ್ರಾಮದ ಅನೇಕರಿಗೆ ಆರೋಗ್ಯದ ಸಮಸ್ಯೆ ಕಾಡುತ್ತಿದೆ. ಇಷ್ಟಾದರೂ ಸರ್ಕಾರ ಈ ಬಗ್ಗೆ ಗಮನ ಹರಿಸಿಲ್ಲ. ಜತೆಗೆ ಹುಣಸೋಡು ಭಾಗದಲ್ಲಿ ಹೆಚ್ಚು ಕ್ವಾರಿಗಳು ಇರುವುದರಿಂದ ಹೆಚ್ಚು ಲಾರಿಗಳು ಓಡಾಡುತ್ತಿವೆ. ಧೂಳಿನ ಸಮಸ್ಯೆಯಿಂದಾಗಿ ಜನರ ಆರೋಗ್ಯ ಹದಗೆಡುತ್ತಿದೆ. ಹಾಗಾಗಿ ಲಾರಿ ಓಡಾಟ ನಿಲ್ಲಿಸಬೇಕು ಜೊತೆಗೆ ಹಾನಿಗೀಡಾಗಿರುವ ಮನೆಗಳಿಗೆ ತಕ್ಷಣ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.