ಶಿವಮೊಗ್ಗ: ಹುಣಸೋಡು ಕಲ್ಲು ಕ್ವಾರಿ ಸ್ಫೋಟದಿಂದ ಬಿರುಕು ಬಿಟ್ಟಿದ್ದ ಮನೆಗಳು ಈಗ ನೆಲಸಮ ಆಗಿವೆ. ಆದರೆ, ಜಿಲ್ಲಾಡಳಿತವಾಗಲಿ ರಾಜ್ಯ ಸರ್ಕಾರವಾಗಲಿ ಇಲ್ಲಿವರೆಗೆ ಪರಿಹಾರ ನೀಡದೇ ನಮ್ಮನ್ನು ಬೀದಿಗೆ ಬೀಳುವಂತೆ ಮಾಡಿದೆ ಎಂದು ಸಂತ್ರಸ್ತರು ಅಳಲು ತೋಡಿಕೊಂಡಿದ್ದಾರೆ.
2021ರ ಜನವರಿ 21ರ ರಾತ್ರಿ ಸಂಭವಿಸಿದ ಹುಣಸೋಡು ಕಲ್ಲು ಕ್ವಾರಿ ದುರಂತ ರಾಜ್ಯಾದ್ಯಂತ ಭಾರಿ ಸದ್ದು ಮಾಡಿತ್ತು. ಈ ಸ್ಫೋಟದಲ್ಲಿ ಆರು ಜನ ಕಾರ್ಮಿಕರು ಸಹ ಸಾವನ್ನಪ್ಪಿದರು. ಕಲ್ಲು ಕ್ವಾರಿಯ ಜಿಲೆಟಿನ್ ಸ್ಫೋಟದ ತೀವ್ರತೆಗೆ ಹುಣಸೋಡು ಸೇರಿದಂತೆ ಅಕ್ಕಪಕ್ಕದ ಗ್ರಾಮಗಳ ಮನೆಗಳು ಸಹ ಬಿರುಕು ಬಿಟ್ಟಿತ್ತು. ಕ್ವಾರಿ ಸ್ಫೋಟದಿಂದಾದ ಹಾನಿಯಿಂದ ಶಿವಮೊಗ್ಗ ನಗರದ ಬೊಮ್ಮನಕಟ್ಟೆಯಲ್ಲಿ ಕೆಲವು ಮನೆಗಳು ನೆಲಸಮವಾದವು.
ಈಗ ಸ್ಫೋಟದ ತೀವ್ರತೆಗೆ ಬಿರುಕು ಬಿಟ್ಟಿದ್ದ ಆರಕ್ಕೂ ಹೆಚ್ಚು ಮನೆಗಳು ಮನೆಗಳು ಕಳೆದ ಕೆಲ ದಿನಗಳ ಹಿಂದೆ ಸುರಿದ ಮಳೆಯಿಂದಾಗಿ ನೆಲಸಮವಾಗಿವೆ. ಆದರೂ ಜಿಲ್ಲಾಡಳಿತವಾಗಲಿ, ರಾಜ್ಯ ಸರ್ಕಾರವಾಗಲಿ ನಮ್ಮ ನೆರವಿಗೆ ಬಂದಿಲ್ಲ, ಮನೆ ಕಟ್ಟಿಸಲು ಹಣ ಇಲ್ಲದೇ ಬೀದಿಯಲ್ಲಿದ್ದೇವೆ. ಈಗಲಾದರೂ ಸರ್ಕಾರ ನಮ್ಮ ಪರಿಸ್ಥಿತಿ ಪರಿಶೀಲಿಸಿ ಪರಿಹಾರ ನೀಡಲಿ ಎಂದು ಸಂತ್ರಸ್ತರು ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:ಹುಣಸೋಡು ಸ್ಫೋಟದಲ್ಲಿ ಹಾನಿಯಾದ ಮನೆಗಳಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ಏಕಾಂಗಿ ಪಾದಯಾತ್ರೆ