ಶಿವಮೊಗ್ಗ: ಹುಣಸೋಡು ಸ್ಫೋಟ ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಲಾಗಿದೆ ಎಂದು ದಾವಣಗೆರೆ ಪೂರ್ವ ವಲಯದ ಐಜಿಪಿ ಎಸ್.ರವಿ ತಿಳಿಸಿದ್ದಾರೆ.
ಎಸ್ಪಿ ಕಚೇರಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಎಸ್.ಎಸ್.ಕ್ರಷರ್ನ ಮಾಲೀಕ ಸುಧಾಕರ್(57), ನರಸಿಂಹ(39), ಮುಮ್ತಾಜ್ ಅಹಮದ್(50) ಹಾಗೂ ರಷೀದ್(44) ರನ್ನು ಬಂಧಿಸಲಾಗಿದೆ. ರಷೀದ್ ಭದ್ರಾವತಿಯ ಜಂಬರಘಟ್ಟದ ನಿವಾಸಿಯಾಗಿದ್ದು, ಉಳಿದ ಮೂವರು ಶಿವಮೊಗ್ಗ ನಗರದವಾಗಿದ್ದಾರೆ.
ಈ ಪ್ರಕರಣದಲ್ಲಿ ಸುಧಾಕರ್ ಕ್ರಷರ್ನ ಮಾಲೀಕ, ನರಸಿಂಹ ಕ್ರಷರ್ನ ಮ್ಯಾನೇಜರ್, ಮುಮ್ತಾಜ್ ಕ್ರಷರ್ನ ಸೂಪರ್ ವೈಸರ್ ಹಾಗೂ ರಷೀದ್ ಕಲ್ಲು ಬಂಡೆಯನ್ನು ಬ್ಲಾಸ್ಟ್ ಮಾಡುವಾತನಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.
ಪ್ರಕರಣದಲ್ಲಿ ಸದ್ಯ ಆರು ಜನ ಸಾವನ್ನಪ್ಪಿದ್ದಾರೆ. ಈಗಾಗಲೇ ಐದು ಜನರ ಗುರುತು ಪತ್ತೆಯಾಗಿದೆ. ಉಳಿದ ಓರ್ವನ ಪತ್ತೆಯಾಗಬೇಕಿದೆ. ಈ ಪ್ರಕರಣದಲ್ಲಿ ಸ್ಫೋಟಕ ಅನಂತಪುರಂನಿಂದ ಇಲ್ಲಿಗೆ ಹೇಗೆ ಬಂತು, ಟೋಲ್ಗೇಟ್ ಹೇಗೆ ದಾಟಿ ಬಂದ್ರು, ಅಷ್ಟೊಂದು ದೊಡ್ಡ ಮಟ್ಟದ ಸ್ಫೋಟದ ವಸ್ತುಗಳು ಹೇಗೆ ಬಂದವು ಎಂಬುದರ ಕುರಿತು ತನಿಖೆಯಿಂದ ಹೊರಬರಬೇಕಿದೆ ಎಂದು ಹೇಳಿದರು.
ನಮ್ಮ ಪೊಲೀಸ್ ಇಲಾಖೆಯಿಂದ ಆರು ಜನರ ತಂಡವನ್ನು ನೇಮಕ ಮಾಡಲಾಗಿದೆ. ಎಲ್ಲವೂ ತನಿಖೆಯಿಂದ ಹೊರಬರಲಿದೆ ಎಂದರು. ಇಲ್ಲಿಗೆ ಅಷ್ಟೊಂದು ದೊಡ್ಡ ಮಟ್ಟದ ಸ್ಫೋಟಕ ವಸ್ತುಗಳು ಇಲ್ಲಿಗೆ ಬಂದು ಯಾರಿಗೆ ಹಂಚಲಾಗುತ್ತಿತ್ತು ಎಂಬುದರ ಬಗ್ಗೆ ತನಿಖೆಯಿಂದ ಹೊರ ಬರುತ್ತದೆ. ಈ ಬಗ್ಗೆ ಈಗಲೇ ಏನೂ ಹೇಳಲು ಆಗಲ್ಲ ಎಂದರು.
ಅಕ್ರಮ ಗಣಿಗಾರಿಕೆ ಬಗ್ಗೆ ನಮ್ಮ ಇಲಾಖೆಯಿಂದ 27 ಕೇಸ್ಗಳನ್ನು ದಾಖಲಿಸಲಾಗಿದೆ. ಐಜಿಪಿ ಎಸ್.ರವಿ ಹೇಳಿದರು. ಈ ವೇಳೆ ಎಸ್ಪಿ ಕೆ.ಎಂ.ಶಾಂತರಾಜು ಹಾಜರಿದ್ದರು.