ಶಿವಮೊಗ್ಗ : ಸಿದ್ದರಾಮಯ್ಯನವರ ಕಾಂಗ್ರೆಸ್ ಚಡ್ಡಿಯನ್ನು ದೇಶದ ಜನ ಬಿಚ್ಚಿ ಕಳುಹಿಸಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸಿದ್ದರಾಮಯ್ಯನವರ ಚಡ್ಡಿ ಸುಡಿ ಅಭಿಯಾನಕ್ಕೆ ಕಿಡಿಕಾರಿದ್ದಾರೆ. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವತ್ತು ಕಾಂಗ್ರೆಸ್ ಎಲ್ಲಿದೆ ಹೇಳಿ, ಇಡೀ ದೇಶದಲ್ಲಿ ಜನರು ಕಾಂಗ್ರೆಸ್ ನ್ನು ಅಟ್ಟಾಡಿಸಿ ಓಡಿಸಿದ್ದಾರೆ. ಹಾಗಾಗಿ ಚಡ್ಡಿ ಸುಡುವ ಕಾರ್ಯಕ್ರಮ ಹಮ್ಮಿಕೊಂಡು ಓಡಾಡುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಇವರ ಕಥೆಯೂ ಮುಗಿಯುತ್ತದೆ ಎಂದು ಹೇಳಿದರು.
ಆರ್ ಎಸ್ ಎಸ್ ನವರು ಯಾವಾಗಲೂ ಗುರಿಯಾಗುತ್ತಿರುವುದು ಅಲ್ಪಸಂಖ್ಯಾತರ ಮತಬ್ಯಾಂಕ್ ಗಾಗಿ. ಆರ್ ಎಸ್ ಎಸ್ ದೇಶ ನಿರ್ಮಾಣ ಮತ್ತು ವ್ಯಕ್ತಿ ನಿರ್ಮಾಣ ಮಾಡುವ ಸಂಘಟನೆಯಾಗಿದೆ. ಈ ದೇಶದಲ್ಲಿ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಮಂತ್ರಿ, ಗೃಹ ಸಚಿವನಾಗಿರುವ ನಾನು ಕೂಡ ಆರ್ ಎಸ್ ಎಸ್ ನವನಾಗಿದ್ದೇನೆ. ಇತರೆ ರಾಜ್ಯದ ಸಿಎಂಗಳು ಆರ್‌ಎಸ್‌ಎಸ್ ನವರಾಗಿದ್ದಾರೆ. ಇಡೀ ದೇಶವೇ ಆರ್ ಎಸ್‌ಎಸ್‌ನ್ನು ಒಪ್ಪಿಕೊಂಡಿದೆ. ಹಾಗಾಗಿ ಆರ್ ಎಸ್ ಎಸ್ ನ ವಿರುದ್ಧ ಮಾತನಾಡಿದಷ್ಟು ಎದುರಾಳಿಗಳು ಕುಗ್ಗುತ್ತಾರೆ ಎಂದು ಸಿದ್ದರಾಮಯ್ಯ ಮಾತನಾಡುತ್ತಿರುವುದಾಗಿ ಹೇಳಿದರು.
ಶ್ರೀರಂಗಪಟ್ಟಣದಲ್ಲಿ ಇಂದು ಜಾಮಿಯಾ ಮಸೀದಿಯಲ್ಲಿ ನಡೆದ ಹಿಂದೂ ಸಂಘಟನೆಗಳ ಶ್ರೀರಂಗಪಟ್ಟಣ ಚಲೋ ಅಭಿಯಾನದ ಕುರಿತು ಪ್ರತಿಕ್ರಿಯಿಸಿದ ಅವರು, ಎಲ್ಲವೂ ಶಾಂತ ರೀತಿಯಲ್ಲಿ ನಡೆದಿದೆ. ಪೊಲೀಸರು ಬಹಳ ಬಂದೋಬಸ್ತ್ ಮಾಡಿದ್ದರು ಎಂದರು. ಎನ್ ಎಸ್ ಯು ಐ ನಿಮ್ಮ ಮನೆಗೂ ನುಗ್ಗುವ ಯತ್ನ ಮಾಡಿತ್ತು ಎಂಬ ಮಾಧ್ಯಮ ಪ್ರಶ್ನೆಗೆ ಉತ್ತರಿಸಿದ ಅವರು, ಎನ್ ಎಸ್ ಯು ಐ ನವರು ಶಿಕ್ಷಣ ಸಚಿವರ ಮನೆಗೂ ನುಗ್ಗುವ ಯತ್ನ ಮಾಡಿ, ಬಟ್ಟೆ ಸುಟ್ಟಿದ್ದರು. ಕಾನೂನು ಅಡಿಯಲ್ಲಿ ಅವರನ್ನು ಬಂಧಿಸಲಾಗಿದೆ. ಹೀಗೆ ಮುಂದುವರೆದರೆ ಕಾನೂನು ಕ್ರಮ ಎಲ್ಲೆಡೆ ನಡೆಯುತ್ತದೆ ಎಂದು ಎಚ್ಚರಿಕೆ ನೀಡಿದರು.
ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ತನಿಖೆ ಸರಿಯಾಗಿ ನಡೆಯುತ್ತಿದೆ : ಪಿಎಸ್ಐ ಮರು ಪರೀಕ್ಷೆ ಕುರಿತು ಮಾಜಿ ಸಿಎಂ ಕುಮಾರಸ್ವಾಮಿಯವರು ಏನೋ ಮಾತನಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಪಿಎಸ್ ಐ ಪರೀಕ್ಷೆ ಬರೆದವರು ಮುತ್ತಿಗೆ ಹಾಕಿರಬಹುದು ಎಂದು ಹೇಳಿದರು. ಆದರೆ ಪಿಎಸ್ಐ ಪರೀಕ್ಷೆಯ ಕುರಿತು ನಡೆಯುತ್ತಿರುವ ತನಿಖೆ ಬಹಳ ಚೆನ್ನಾಗಿ ನಡೆಯುತ್ತಿದೆ. ಹಗರಣದಲ್ಲಿ ಯಾರು ಭಾಗಿಯಾಗಿದ್ದಾರೆ ಅವರನ್ನ ಬಿಡೋ ಮಾತೇ ಇಲ್ಲ. ಸಿಐಡಿ ತಂಡ ಬಹಳ ಚೆನ್ನಾಗಿ ತನಿಖೆ ನಡೆಸುತ್ತಿದೆ. ಪೊಲೀಸರನ್ನೂ ಬಿಡಲಿಲ್ಲ. ಮಕ್ಕಳು ಬಹಳ ಕಷ್ಟಪಟ್ಟು ಪರೀಕ್ಷೆ ಬರೆದು ಸಬ್ ಇನ್ ಸ್ಪೆಕ್ಟರ್ ಆಗುವ ಕನಸು ಕಂಡಿರುತ್ತಾರೆ. ಹಣ ಇದ್ದರೆ ಸಾಕು ಏನನ್ನೂ ಬೇಕಾದರೂ ಸಂಪಾದಿಸಬಹುದು ಎಂಬ ಭ್ರಮೆಗೆ ಬಂದವರಿಗೆ ಇದು ತಕ್ಕಪಾಠವಾಗಿದೆ ಎಂದರು. ಹಿಂದೆ ಕಾಂಗ್ರೆಸ್ ಕಾಲದಲ್ಲಿ ಇದೇ ರೀತಿ ಪರೀಕ್ಷೆ ನಡೆದಿದ್ದವು. ನಮ್ಮ ಕಾಲದಲ್ಲಿ ಈ ರೀತಿ ಹಗರಣ ರೀತಿಯಲ್ಲಿ ಪರೀಕ್ಷೆ ನಡೆಯಲು ಬಿಡುವುದಿಲ್ಲ. ಒಂದು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುತ್ತೇವೆ ಎಂದು ಭರವಸೆ ನೀಡಿದರು.
ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ರು ಇನ್ನು ಮುಂದೆ ಮಸೀದಿಯಲ್ಲಿ ಶಿವಲಿಂಗ ಹುಡುಕುವ ಕೆಲಸಕ್ಕೆ ಕೈಹಾಕುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎಂಬ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ದೇಶದ ಶಾಂತಿ ಸುವ್ಯವಸ್ಥೆ ಹಿನ್ನೆಲೆಯಲ್ಲಿ ಮೋಹನ್ ಭಾಗವತ್ ಹೇಳಿಕೆ ಸರಿ ಇದೆ ಎಂದರು.
ಓದಿ : ಪಠ್ಯ ಪರಿಷ್ಕರಣೆ ದಲಿತ, ಮಹಿಳಾ, ಸಾಮಾಜಿಕ ನ್ಯಾಯ, ಸಮಾನತೆ ವಿರೋಧಿ ಕ್ರಮ: ಬರಗೂರು