ಶಿವಮೊಗ್ಗ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನನಗೆ ಗೃಹ ಖಾತೆಯಂತಹ ಮಹತ್ವದ ಹುದ್ದೆ ನೀಡಿದ್ದಾರೆ. ಅದನ್ನು ಸಮರ್ಥವಾಗಿ ನಿಭಾಯಿಸುವುದು ನನ್ನ ಜೀವನದ ಚಾಲೆಂಜ್ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎರಡು ವರ್ಷದ ಕಡಿಮೆ ಅವಧಿ ನನಗಿದೆ. ಕೊನೆಯ ಎರಡು ಮೂರು ತಿಂಗಳಲ್ಲಿ ಚುನಾವಣಾ ನೀತಿಸಂಹಿತೆ ಜಾರಿಗೆ ಬರುತ್ತದೆ. ಹೀಗಾಗಿ, ಸಿಕ್ಕಿರುವ ಕಡಿಮೆ ಅವಧಿಯಲ್ಲಿ ಇಲಾಖೆಯನ್ನು ಜನಸ್ನೇಹಿಯನ್ನಾಗಿ ಮಾಡಬೇಕು. ಇಡೀ ದೇಶದಲ್ಲಿ ನಮ್ಮ ರಾಜ್ಯದ ಪೊಲೀಸ್ ಇಲಾಖೆಗೆ ಒಳ್ಳೆಯ ಹೆಸರಿದೆ. ಹೀಗಾಗಿ, ಇಲಾಖೆಗೆ ಇನ್ನಷ್ಟು ಶಕ್ತಿ ತುಂಬುವ ಕೆಲಸ ಮಾಡುತ್ತೇವೆ ಎಂದರು.
ನಾನು ಯಾವುದೇ ಇಲಾಖೆಕೊಟ್ಟರೂ ನಿಭಾಯಿಸುತ್ತೇನೆ ಎಂದು ಹೇಳಿದ್ದೆ. ಸಿಎಂ ಅತಿ ದೊಡ್ಡ ಹುದ್ದೆಯನ್ನು ನೀಡಿದ್ದಾರೆ. ನಾನು ಸರಳವಾಗಿ ಬದುಕಿದವನು. ರೋಡ್ ಪಕ್ಕದ ಸಣ್ಣ ಕ್ಯಾಂಟೀನ್ನಲ್ಲಿ ಟೀ ಕುಡಿಯುತ್ತಿದ್ದೆ. ಆದರೆ, ಈಗ ಹಿಂದೆ ಮುಂದೆ ಪೊಲೀಸ್ ವಾಹನಗಳು ಇರುತ್ತವೆ. ಪೊಲೀಸ್ ಇಲಾಖೆ ಏನು ಮಾಡಬೇಕು? ಏನು ಮಾಡಬಾರದು? ಎಂದು ನನಗೆ ಗೊತ್ತಿದೆ ಎಂದು ಹೇಳಿದರು.
ಯಾರು ಸಮಾಜ ಘಾತುಕರಿದ್ದಾರೋ ಅವರ ವಿರುದ್ಧ ಪೊಲೀಸರು ಸರಿಯಾದ ಕ್ರಮ ಕೈಗೊಳ್ಳಲಿದ್ದಾರೆ. ಸಾಮಾನ್ಯ ಜನರು ಯಾವುದೇ ಕಾರಣಕ್ಕೂ ಭಯಪಡುವ ಅಗತ್ಯವಿಲ್ಲ. ಅಪರಾಧಿಗಳು ಮಾತ್ರ ಭಯಪಡಬೇಕು. ನಮ್ಮಲ್ಲೂ ಅಕ್ರಮ ವಲಸಿಗರಿದ್ದಾರೆ. ಅವರನ್ನು ಹೊರಕಳಿಸಲಾಗುವುದು ಎಂದು ಎಚ್ಚರಿಕೆ ರವಾನಿಸಿದರು.
ಓದಿ: ಕೋವಿಡ್ ಸೋಂಕಿನಿಂದ ಗುಣಮುಖರಾದವರು ಕ್ಷಯ ರೋಗದ ತಪಾಸಣೆ ಮಾಡಿಸಿ : ಸಚಿವ ಡಾ ಕೆ ಸುಧಾಕರ್