ಶಿವಮೊಗ್ಗ: ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ಮಲೆನಾಡಿನಲ್ಲಿ ಗುಡ್ಡಗಳು ಕುಸಿತವಾಗುತ್ತಿವೆ. ಸಾಗರ ತಾಲೂಕು ಬಾರಂಗಿ ಹೋಬಳಿಯ ಆರೋಡಿ ಗ್ರಾಮದ ಬಂಗಾರಮ್ಮ ಎಂಬುವರ ಅಡಿಕೆ ತೋಟದ ಮೇಲೆ ಗುಡ್ಡ ಕುಸಿತವಾಗಿ ಅಡಿಕೆ ತೋಟವೇ ಮಣ್ಣಿನಲ್ಲಿ ಮುಳುಗಿ ಹೋಗಿದೆ.
ಬಂಗಾರಮ್ಮನವರದ್ದು 3.50 ಎಕರೆ ಅಡಿಕೆ ತೋಟ. ತೋಟದಲ್ಲಿ ಆಗ ತಾನೇ ಫಸಲು ಬರುತ್ತಿತ್ತು. ಇದರಲ್ಲಿ ಈಗ 39 ಗುಂಟೆ ಭೂಮಿ ಕುಸಿತವಾಗಿದೆ. ಬಂಗಾರಮ್ಮನವರ ಐವರು ಮಕ್ಕಳಿಗೆ ಈ ಭೂಮಿಯನ್ನು ಹಂಚಿಕೆ ಮಾಡಲಾಗಿದೆ. ಅಣ್ಣ, ತಮ್ಮ ಒಟ್ಟಿಗಿದ್ದು, ತೋಟದ ಪಕ್ಕದಲ್ಲಿಯೇ ಮನೆ ಕಟ್ಟಿಕೊಂಡು ಜೀವನ ನಡೆಸುತ್ತಿದ್ದರು. ಈಗ ಇವರಿಗೆ ಮುಂದೇನು ಎಂಬುದೇ ತಿಳಿಯದಂತಾಗಿದೆ.
ಗುಡ್ಡ ಕುಸಿತ ಕಂಡ ಪ್ರದೇಶಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪನವರು ಡಿಸಿ ಶಿವಕುಮಾರ್ ಜೊತೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ತೋಟ ನಾಶವಾದ ಬಗ್ಗೆ ಸರ್ವೇ ನಡೆಸಿ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಈ ವೇಳೆ ಮಾತನಾಡಿದ ಸಹೋದರರು ತಮಗೆ ಇರುವ ಒಂದೇ ಭೂಮಿ ಈಗ ಇಲ್ಲದಂತಾಗಿದೆ. ಮುಂದೇನು ಎಂಬುದೇ ತಿಳಿಯುತ್ತಿಲ್ಲ. ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಹಾಗೂ ಪರ್ಯಾಯ ಭೂಮಿ ನೀಡಬೇಕು ಎಂದು ಆಗ್ರಹಿಸಿದ್ದಾರೆ.