ಶಿವಮೊಗ್ಗ: ತಾಲೂಕು ಕಾಡಂಚಿನ ಹಾಯ್ ಹೊಳೆ ಗ್ರಾಮದ ಕೆರೆಗೆ ಇಂದು ಗ್ರಾಮಾಂತರ ಶಾಸಕ ಅಶೋಕ್ ನಾಯ್ಕ ಅವರು ಬಾಗಿನ ಅರ್ಪಿಸಿದರು.
ತುಂಗಾ ನದಿಯಿಂದ ಏತ ನೀರಾವರಿಯ ಮೂಲಕ ಕೆರೆಯನ್ನು ತುಂಬಿಸಲಾಗುತ್ತಿದೆ. ಇದರಿಂದ ತುಂಬಿದ ಹಾಯ್ ಹೊಳೆ ಕೆರೆಗೆ ಇಂದು ಶಾಸಕರು ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿದರು. ಈ ಕೆರೆಯು ಸುಮಾರು 8 ಗ್ರಾಮಗಳ 1,200 ಎಕರೆ ಭೂಮಿಗೆ ನೀರು ಪೂರೈಕೆ ಮಾಡುತ್ತದೆ. ಈ ಕೆರೆಯ ಎಡ ಮತ್ತು ಬಲ ಕಾಲುವೆಗಳಿಂದ ನೀರನ್ನು ಹಾಯಿಸಲಾಗುತ್ತಿದೆ. ಕೆರೆ ತುಂಬಿದ್ರೆ, ಈ ಭಾಗದ ರೈತರು ಎರಡು ಬೆಳೆಯನ್ನು ತೆಗೆಯಬಹುದಾಗಿದೆ. ಇಲ್ಲಿ ಹೆಚ್ಚಿನ ರೈತರು ಬಗರ್ ಹುಕುಂ ಸಾಗುವಳಿ ಮಾಡುತ್ತಿದ್ದಾರೆ.
ಶಾಸಕ ಅಶೋಕ ನಾಯ್ಕ ಅವರು ತಮ್ಮ ಬೆಂಬಲಿಗರೊಂದಿಗೆ ಆಗಮಿಸಿ, ಕೆರೆಗೆ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿದರು. ಈ ಕೆರೆಯು ಪ್ರತಿ ವರ್ಷ ಇದೇ ರೀತಿ ತುಂಬುತ್ತಿರಲಿ ಎಂದು ಪ್ರಾರ್ಥಿಸಿದರು. ಶಿವಮೊಗ್ಗದ ಹರಕರೆ ಬಳಿ ತುಂಗಾ ನದಿಯಿಂದ ಹಾಯ್ ಹೊಳೆ, ಬಾರೆಹಳ್ಳ ಹಾಗೂ ಗೌಡನ ಕೆರೆಗೆ ಏತ ನೀರಾವರಿ ಮೂಲಕ ನೀರು ಹಾಯಿಸಲಾಗುತ್ತಿದೆ.