ಶಿವಮೊಗ್ಗ: ಕೋವಿಡ್ ನಿಯಮಾವಳಿ ಪ್ರಕಾರ ಇಂದಿನಿಂದ 6 ರಿಂದ 8ನೇ ತರಗತಿಗಳು ಪುನಾರಂಭವಾಗಿವೆ. ಕಳೆದ ಎರಡು ವರ್ಷಗಳಿಂದ ಮನೆಯಲ್ಲಿಯೇ ಆನ್ಲೈನ್ ಪಾಠ ಕಲಿಯುತ್ತಿದ್ದ ವಿದ್ಯಾರ್ಥಿಗಳು ಇಂದು ಶಾಲೆಗೆ ಬಂದಿದ್ದಾರೆ.
ಶಾಲೆಗೆ ಬಂದ ವಿದ್ಯಾರ್ಥಿಗಳಿಗೆ ಶಿಕ್ಷಕರು ಹಾಗೂ ಎಸ್ಡಿಎಂಸಿ ಸಮಿತಿ ಸದಸ್ಯರು ಆದರರಿಂದ ಸ್ವಾಗತ ಕೋರಿದರು. ಮಕ್ಕಳಿಗೆ ಗುಲಾಬಿ ಹೂ ಹಾಗೂ ಮಾಸ್ಕ್ ನೀಡಿ ಬರಮಾಡಿಕೊಂಡರು. ಶಾಲೆಗೆ ಆಗಮಿಸುತ್ತಿದ್ದಂತೆಯೇ ವಿದ್ಯಾರ್ಥಿಗಳು ಫುಲ್ ಖುಷಿಯಾಗಿದ್ದಾರೆ. ಸಹಪಾಠಿ ಗೆಳೆಯ-ಗೆಳತಿಯರನ್ನು ಕಂಡು ಸಂಭ್ರಮಿಸಿದ್ದಾರೆ. ತಮ್ಮ ನೆಚ್ಚಿನ ಶಿಕ್ಷಕರನ್ನು ಕಂಡು ಸಂತಸ ಪಟ್ಟಿದ್ದಾರೆ.
ಇಂದು ಶಾಲೆಗಳು ಪ್ರಾರಂಭಕ್ಕೂ ಮುನ್ನ ಕಳೆದ ಎರಡು ದಿನಗಳಿಂದ ಶಾಲೆಯ ಶಿಕ್ಷಕ ವೃಂದ ಹಾಗೂ ಶಾಲಾ ಅಭಿವೃದ್ದಿ ಸಮಿತಿಯವರು ಶಾಲೆಯ ತರಗತಿ, ಶಾಲೆಯ ಅವರಣವನ್ನು ಸ್ವಚ್ಛಗೊಳಿಸಿದ್ದಾರೆ. ತರಗತಿಗೆ ಸ್ಯಾನಿಟೈಸರ್ ಸಿಂಪಡಿಸಿದ್ದಾರೆ.
ಆನ್ಲೈನ್ ಕ್ಲಾಸ್ ಕೇಳಿ ಬೇಜಾರಾಗಿತ್ತು:
ಕಳೆದ ಎರಡು ವರ್ಷದಿಂದ ಆನ್ಲೈನ್ ಕ್ಲಾಸ್ ಕೇಳಿ ಬೇಜಾರಾಗಿತ್ತು. ಅಲ್ಲಿ ಪಾಠಗಳು ಸರಿಯಾಗಿ ನಡೆಯುತ್ತಿರಲಿಲ್ಲ. ಇಂದಿನಿಂದ ತರಗತಿ ಪ್ರಾರಂಭವಾಗಿರುವುದು ಖುಷಿ ತಂದಿದೆ ಎಂದು ವಿದ್ಯಾರ್ಥಿಗಳು 'ಈಟಿವಿ ಭಾರತ'ದೊಂದಿಗೆ ಸಂತಸ ಹಂಚಿಕೊಂಡಿದ್ದಾರೆ.
ನೇರ ತರಗತಿ ಪ್ರಾರಂಭಿಸಿದ್ದು ಸರಿಯಾಗಿದೆ:
ನಮ್ಮ ಮಕ್ಕಳು ಮನೆಯಲ್ಲಿದ್ದು ಓದುವುದನ್ನೇ ಮರೆತಿದ್ದರು. ಮೊಬೈಲ್ನಲ್ಲಿ ಪಾಠ ಕೇಳಲು ಸಮಸ್ಯೆ ಅನುಭವಿಸುತ್ತಿದ್ದರು. ಕಣ್ಣು ನೋವು, ಪಾಠ ಅರ್ಥವಾಗದೆ ಪರದಾಡುತ್ತಿದ್ದರು. ಕೆಲವರಿಗೆ ಮೊಬೈಲ್ ಇಲ್ಲದೆ ಪಾಠ ಕೇಳಲು ಆಗುತ್ತಿರಲಿಲ್ಲ. ಈಗ ನೇರ ತರಗತಿ ಪ್ರಾರಂಭ ಮಾಡಿದ್ದು ಒಳ್ಳೆಯದು ಎನ್ನುತ್ತಾರೆ ಪೋಷಕರು.
'ನಮಗೂ ಶಾಲೆ ಆರಂಭಿಸಿ ಸಿಎಂ ಸರ್':
ಅತ್ತ ತನ್ನ ಅಕ್ಕನನ್ನು ಶಾಲೆಗೆ ಬಿಡಲು ಬಂದ 5ನೇ ತರಗತಿ ವಿದ್ಯಾರ್ಥಿಯೊಬ್ಬ ನಮಗೆ ಎರಡು ವರ್ಷದಿಂದ ಮನೆಯಲ್ಲಿದ್ದು ಬೇಜಾರಾಗಿದೆ. ನಮಗೂ ಶಾಲೆ ಪ್ರಾರಂಭಿಸಿ ಸಿಎಂ ಸರ್ ಎಂದು ಸಿಎಂಗೆ ಬಾಲಕನೋರ್ವ ಮನವಿ ಮಾಡಿದ್ದಾನೆ.
ಶಾಸಕ ಹಾಲಪ್ಪರಿಂದ ವಿದ್ಯಾರ್ಥಿಗಳ ಮೇಲೆ ಹೂಮಳೆ:
ಸಾಗರದ ಸರ್ಕಾರಿ ಪಿಯು ಕಾಲೇಜ್ ಇಂದಿನಿಂದ ಪ್ರಾರಂಭವಾಗಿದೆ. ಕಾಲೇಜಿನಲ್ಲಿ ನೆನೆಗುದಿಗೆ ಬಿದ್ದಿದ್ದ ಕಾಮಗಾರಿಯಿಂದಾಗಿ ತಡವಾಗಿ ಇಂದು ಕಾಲೇಜು ಪ್ರಾರಂಭಿಸಲಾಗಿದೆ. ಇದರಿಂದ ಶಾಸಕ ಹಾಲಪ್ಪ ಅವರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಜೊತೆಗೂಡಿ ಸ್ವಾಗತ ಕೋರಿ ಮಕ್ಕಳಿಗೆ ಪುಷ್ಪವೃಷ್ಟಿ ಮಾಡಿದರು. ಇದರಿಂದ ವಿದ್ಯಾರ್ಥಿಗಳು ಸಂತಸ ಪಟ್ಟರು.