ಸಾಗರ : ನಗರದ ಉಪವಿಭಾಗೀಯ ಆಸ್ಪತ್ರೆಯಲ್ಲಿ ಕರ್ತವ್ಯ ನಿರತ ವೈದ್ಯಾಧಿಕಾರಿಗಳ ಮೇಲೆ ತಾಲೂಕು ಪಂಚಾಯತಿ ಅಧ್ಯಕ್ಷರು ಹಲ್ಲೆ ನಡೆಸಲು ಮುಂದಾಗಿದ್ದನ್ನು ಖಂಡಿಸಿ, ಹಾಗೂ ವೈದ್ಯರ ಮೇಲೆ ಹಲ್ಲೆಗೆ ಯತ್ನಿಸಿದ ತಾ.ಪಂ. ಅಧ್ಯಕ್ಷರ ಮೇಲೆ ಕ್ರಮ ತೆಗದು ಕೊಳ್ಳಬೇಕು ಎಂದು ಜಿಲ್ಲಾ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಡಾ.ಗುಡ್ಡಪ್ಪ ಕಸುಬಿ ಆಗ್ರಹಿಸಿದ್ದಾರೆ.
ಸಾಗರ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ಡಾ. ಪ್ರಕಾಶ್ ಬೋಸ್ಲೆ ರವರ ಮೇಲೆ ಸಾಗರ ತಾ.ಪಂ. ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ರವರು ಚೇರ್ ನಿಂದ ಹಲ್ಲೆಗೆ ಯತ್ನಿಸಿದ್ದರು. ಇದನ್ನು ಖಂಡಿಸಿ ಕಳೆದ 15 ರಂದು ಸಾಗರ ಉಪ ವಿಭಾಗೀಯ ಆಸ್ಪತ್ರೆ ವೈದ್ಯರು ತಮ್ಮ ಸೇವೆ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದ್ದರು. ಸಾಗರದ ಆಸ್ಪತ್ರೆಯಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ನಾನ್ ಕ್ಲಿನಿಕಲ್ ಸೇವೆಗಾಗಿ ಜನರನ್ನು ನೇಮಕ ಮಾಡಿ ಕೊಳ್ಳಲಾಗಿತ್ತು. ಆದರೆ ಸರ್ಕಾರದ ಆದೇಶದ ಮೇರೆಗೆ ಹೊರ ಗುತ್ತಿಗೆಯ ಏಜೆನ್ಸಿಯವರು ಸಾಗರ ಆಸ್ಪತ್ರೆಯ ನಾನ್ ಕ್ಲಿನಿಕಲ್ ಕೆಲಸದಲ್ಲಿದ್ದವರನ್ನು ಕೆಲಸದಿಂದ ತೆಗೆದು ಹಾಕಿದ್ದರು.
ಕೆಲಸದಿಂದ ತೆಗೆದು ಹಾಕಿದ ನೌಕರರನ್ನು ವಾಪಸ್ ಕೆಲಸಕ್ಕೆ ತೆಗೆದು ಕೊಳ್ಳಬೇಕು ಎಂದು ತಾ.ಪಂ. ಅಧ್ಯಕ್ಷ ಮಲ್ಲಿಕಾರ್ಜುನ್ ಹಕ್ರೆ, ಡಾ.ಬೋಸ್ಲೆ ಕಚೇರಿಗೆ ಬಂದಿದ್ದಾರೆ. ಈ ವೇಳೆ ಸರ್ಕಾರಿ ಆದೇಶದ ಮೇರೆಗೆ ಹೊರಗುತ್ತಿಗೆ ಏಜೆನ್ಸಿರವರು ಇವರನ್ನ ಕೆಲಸದಿಂದ ತೆಗೆದು ಹಾಕಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಆದ್ರೆ ಹಕ್ರೆ ರವರು ಅವಾಚ್ಯ ಶಬ್ದಗಳಿಂದ ಬೈಯ್ದು, ಚೇರ್ ನಲ್ಲಿ ಹಲ್ಲೆಗೆ ಮುಂದಾಗಿದ್ದರು. ಇದನ್ನು ಖಂಡಿಸಿ, ಸಾಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು. ಡಾ.ಬೋಸ್ಲೆರವರ ದೂರಿಗೆ, ಪ್ರತಿ ದೂರಾಗಿ ತಾ.ಪಂ. ಅಧ್ಯಕ್ಷ ಹಕ್ರೆ ಸಹ ದೂರು ನೀಡಿದ್ದಾರೆ. ಇನ್ನೂ ಕೆಲವರಿಂದ ಜಾತಿ ನಿಂದನೆ ಕೇಸ್ ಸಹ ಹಾಕಿಸಿದ್ದಾರೆ ಎಂದು ಡಾ.ಗುಡ್ಡಪ್ಪ ಕಸುಬಿ ಆರೋಪಿಸಿದರು.
ಸರ್ಕಾರಿ ವೈದ್ಯಾಧಿಕಾರಿ ಮೇಲೆ ಹಲ್ಲೆ ನಡೆಸಿದರು ಎಂದು ದೂರು ನೀಡಿದರೂ ಸಹ ಪೊಲೀಸರು ಯಾವುದೇ ಕ್ರಮ ತೆಗೆದು ಕೊಂಡಿಲ್ಲ. ಪೊಲೀಸರು ಕ್ರಮ ತೆಗೆದು ಕೊಳ್ಳದೆ ಇರುವುದರಿಂದ ನಾವು ಭಯದ ವಾತಾವರಣದಲ್ಲಿ ಕೆಲಸ ಮಾಡುವಂತೆ ಆಗಿದೆ. ಇದರಿಂದ ಅಲ್ಲಿ ವೈದ್ಯರು ಸಾಮೂಹಿಕ ರಾಜೀನಾಮೆಗೆ ನಿರ್ಧಾರ ಮಾಡಿದ್ದಾರೆ. ಇದರಿಂದ ವೈದ್ಯರ ಮೇಲೆ ಹಲ್ಲೆಗೆ ಯತ್ನ ಮಾಡಿದವರ ವಿರುದ್ದ ಕ್ರಮ ತೆಗೆದು ಕೊಳ್ಳಬೇಕು ಎಂದು ಆಗ್ರಹಿಸಿ ಸರ್ಕಾರಿ ವೈದ್ಯಾಧಿಕಾರಿಗಳ ಜಿಲ್ಲಾ ಸಂಘ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.