ಶಿವಮೊಗ್ಗ: ಅಧರ್ಮ ಮಿತಿಮೀರಿದ ಕಾಲದಲ್ಲಿ ಅಧರ್ಮವನ್ನು ಅಳಿಸಿ ಧರ್ಮವನ್ನು ಎತ್ತಿಹಿಡಿದು ದುಷ್ಟರನ್ನು ಸಂಹರಿಸಿ, ಶಿಷ್ಟರನ್ನು ರಕ್ಷಿಸಿ ಉದ್ಧರಿಸಿದ ಲೋಕೋದ್ಧಾರಕ ಶ್ರೀಕೃಷ್ಣ ಎಂದು ಅಪರ ಜಿಲ್ಲಾಧಿಕಾರಿ ಜಿ.ಅನುರಾಧ ಹೇಳಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಯಾದವ ಗೊಲ್ಲರ ಸಮಾಜ ಸಂಯುಕ್ತಾಶ್ರಯದಲ್ಲಿ ನಗರದ ಕುವೆಂಪು ರಂಗಮಂದಿರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಏರ್ಪಡಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಅಪರ ಜಿಲ್ಲಾಧಿಕಾರಿ, ಶ್ರೀಕೃಷ್ಣ ಸಾಮಾನ್ಯ ಮಾನವರಂತೆ ಜೀವಿಸಿ, ಪವಾಡ ಸೃಷ್ಟಿಸಿ ಪರಬ್ರಹ್ಮ ಸ್ವರೂಪಿಯಾಗಿ ಗೋಚರಿಸಿ ತನ್ನ ವಿಶ್ವರೂಪವನ್ನೇ ಪ್ರದರ್ಶಿಸಿ ಅಸಾಧಾರಣನೆನಿಸಿದ್ದಾನೆ ಎಂದರು.
ಅಸಾಮಾನ್ಯ ಶಕ್ತಿ ಹೊಂದಿದ್ದ ಕೃಷ್ಣ ಎಲ್ಲಿಯೂ ರಾಜ್ಯಭಾರ ಮಾಡಲಿಲ್ಲ. ಅಧಿಕಾರ ಮೆರೆದು ದಬ್ಬಾಳಿಕೆ ಮಾಡಲಿಲ್ಲ. ಎಲ್ಲ ಸಂದರ್ಭದಲ್ಲೂ ಸ್ಥಿತಪ್ರಜ್ಞನಾಗಿದ್ದು, ನ್ಯಾಯದ ಪರವಾಗಿದ್ದ, ಅಧಿಕಾರ ಶಾಶ್ವತವಲ್ಲ, ಯಾವುದೇ ವ್ಯಕ್ತಿ ಮಾಡುವ ಕಾರ್ಯಗಳು ಸಮಾಜಮುಖಿ ಹಾಗೂ ಅದರ್ಶಪ್ರಾಯವಾಗಿರಬೇಕು. ಅದರಿಂದಾಗಿಯೇ ವ್ಯಕ್ತಿ ಲೋಕಪೂಜ್ಯನಾಗುತ್ತಾನೆ ಎಂದು ಹೇಳಿದರು.
ಭಾರತೀಯ ಆಧ್ಯಾತ್ಮ ಜೀವನ ಧರ್ಮದ ಸಂವಿಧಾನ ಎಂದೆನಿಸಿರುವ ಭಗವದ್ಗೀತೆಯು ಕರ್ಮ-ಭಕ್ತಿ-ಜ್ಞಾನ ಯೋಗಗಳ ಸಾರವಾಗಿದೆ. ಅದನ್ನು ಹೃದಯಂಗಮವಾಗಿ ಬೋಧಿಸಿರುವ ಶ್ರೀಕೃಷ್ಣ ಆಧ್ಯಾತ್ಮ ಲೋಕದಲ್ಲಿ ವಿಶೇಷವಾಗಿ ಗುರುತಿಸಲ್ಪಡುತ್ತಾನೆ ಎಂದರು.
ಶಿವಮೊಗ್ಗ ಸೇರಿ ರಾಜ್ಯದ ಹಲವು ಜಿಲ್ಲೆಗಳು ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಅಲ್ಲದೆ ಭಾರಿ ಪ್ರಮಾಣದ ಬೆಳೆ ನಷ್ಟ ಉಂಟಾಗಿದೆ. ಈ ಸಂದರ್ಭದಲ್ಲಿ ಶ್ರೀಕೃಷ್ಣ ಜಯಂತಿಯನ್ನು ಅದ್ಧೂರಿಯಾಗಿ ಅಚರಿಸದೇ ಅದರ ಅನುದಾನವನ್ನು ಸಂತ್ರಸ್ತರ ನಿಧಿಗೆ ಸಮರ್ಪಿಸಲು ಯಾದವ ಗೊಲ್ಲ ಸಮುದಾದವರು ಕೈಗೊಂಡಿರುವ ನಿರ್ಣಯ ಪ್ರಶಂಸನಾರ್ಹವಾದುದು ಎಂದವರು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಯಾದವ ಗೊಲ್ಲ ಸಮಾಜದ ಅಧ್ಯಕ್ಷ ಮೈಲಾರಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಸೇರಿದಂತೆ ಯಾದವ ಗೊಲ್ಲ ಸಮಾಜದ ಪದಾಧಿಕಾರಿಗಳು ಉಪಸ್ಥಿತರಿದ್ದರು.