ಶಿವಮೊಗ್ಗ: ಭದ್ರಾವತಿಯ ಮಾಜಿ ಶಾಸಕ, ಜೆಡಿಎಸ್ ಮುಖಂಡ ಎಂ. ಜೆ. ಅಪ್ಪಾಜಿ ಗೌಡ ತಡರಾತ್ರಿ ವಿಧಿವಶರಾಗಿದ್ದು, ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಸಿಎಂ ಯಡಿಯೂರಪ್ಪ ಸೇರಿದಂತೆ ಶಿವಮೊಗ್ಗ ಜೆಡಿಎಸ್ ಘಟಕ ಮತ್ತು ಹಲವು ಸಂಘಟನೆಗಳು ಸಂತಾಪ ಸೂಚಿಸಿವೆ.
ಅಪ್ಪಾಜಿ ಗೌಡರು ತಮ್ಮ ಜೀವಿತಾವಧಿಯಲ್ಲಿ ಸದಾ ಭದ್ರಾವತಿಯ ವಿಐಎಸ್ಎಲ್ ಹಾಗೂ ಎಂಪಿಎಂ ಕಾರ್ಖಾನೆಯ ಕಾರ್ಮಿಕರ ಧ್ವನಿಯಾಗಿ ಕೆಲಸ ಮಾಡುತ್ತಿದ್ದರು. ಮೃತ ಮಾಜಿ ಶಾಸಕ ಎಂ.ಜೆ.ಅಪ್ಪಾಜಿಗೌಡ ಅವರು ಭದ್ರಾವತಿ ಕ್ಷೇತ್ರದಿಂದ ಒಟ್ಟು 3 ಬಾರಿ ಶಾಸಕರಾಗಿದ್ದರು. ಮಾಜಿ ಶಾಸಕರ ನಿಧನದ ಸುದ್ದಿ ಕೇಳಿ ಈಡಿ ಭದ್ರಾವತಿ ಕ್ಷೇತ್ರದ ಜನತೆ ಶೋಕ ಸಾಗರದಲ್ಲಿ ಮುಳುಗಿದೆ. ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಪ್ಪಾಜಿಗೌಡರು ಅಗಲಿದ್ದಾರೆ.
ಮಾಜಿ ಶಾಸಕರು ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ಕರೊನಾವನ್ನು ಲೆಕ್ಕಿಸದೇ ಆಸ್ಪತ್ರೆ ಮುಂದೆ ಸಾವಿರಾರು ಸಂಖ್ಯೆಯಲ್ಲಿ ಅವರ ಅನುಯಾಯಿಗಳು ಜಮಾಯಿಸಿದ್ದರು. ನಂತರ ಮಧ್ಯೆ ರಾತ್ರಿ 2 ಗಂಟೆಗೆ ಪಾರ್ಥಿವ ಶರೀರವನ್ನು ಭದ್ರಾವತಿಯ ಅವರ ನಿವಾಸಕ್ಕೆ ಕೊಂಡೊಯ್ಯಲಾಯಿತು. ಅವರ ಪಾರ್ಥಿವ ಶರೀರ ತಮ್ಮ ನಿವಾಸಕ್ಕೆ ತೆರಳುತ್ತಿದ್ದಂತೆ ನಿವಾಸದ ಬಳಿಯಲ್ಲಿಯೂ ಅಂತಿಮ ದರ್ಶನ ಪಡೆಯಲು ಸಾವಿರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಅಂತಿಮವಾಗಿ ಇಂದು ಭದ್ರಾವತಿಯ ಗೋಣಿಬೀಡಿನ ತೋಟದಲ್ಲಿ ಮಾಜಿ ಶಾಸಕರ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು.