ಶಿವಮೊಗ್ಗ : ರಾಜ್ಯ ಸರ್ಕಾರದ ಭೂ ಕಬಳಿಕೆ ನಿಷೇಧ ಕಾಯ್ದೆ ಮಲೆನಾಡಿನ ರೈತರಿಗೆ ಮಾರಕವಾಗಿ ಪರಿಣಮಿಸಿದ್ದು, ಜಿಲ್ಲೆಯ ಹತ್ತಾರು ರೈತರು ಜೈಲು ಸೇರುವಂತೆ ಮಾಡಿದೆ.
ಶರಾವತಿ ನದಿಗೆ ಹೀರೆ ಭಾಸ್ಕರ ಡ್ಯಾಂ ಕಟ್ಟಿದಾಗ ಮುಳುಗಡೆಯಾಗಿ ಬಂದ ಜಿಲ್ಲೆಯ ಜನರ ಜೀವನ ಇದ್ದು ಇಲ್ಲದಂತಾಗಿದೆ. ಸರ್ಕಾರವೆನೋ ನಿರಾಶ್ರಿತರಿಗೆ ಭೂಮಿ ಮಂಜೂರು ಮಾಡಿತು. ಆದರೆ ಅರಣ್ಯ ಇಲಾಖೆ ಮಾತ್ರ ಭೂಮಿ ಒತ್ತುವರಿ ಎಂದು ರೈತರ ಮೇಲೆ ಕೇಸು ಹಾಕಿ ಜೈಲಿಗಟ್ಟುತ್ತಿದೆ.
ಜಿಲ್ಲೆಯ ಸಾಗರ ತಾಲೂಕಿನ ಆವಿನಹಳ್ಳಿ ಹೋಬಳಿ ಹಾಗೂ ಬಾರಂಗಿ ಹೋಬಳಿಯ ರೈತರಿಗೆ ಅರಣ್ಯ ಇಲಾಖೆ ಭೂ ಕಬಳಿಕೆ ನಿಷೇಧ ಕಾಯ್ದೆಯಡಿ ನೋಟಿಸ್ ಜಾರಿ ಮಾಡಿದೆ. ನೋಟಿಸ್ ಜಾರಿ ಹಿನ್ನಲೆಯಲ್ಲಿ ರೈತರು ಬೆಂಗಳೂರಿನ ವಿಶೇಷ ಕೋರ್ಟ್ಗೆ ಹಾಜರಾಗಿದ್ದು, ಕೋರ್ಟ್ ಕಾಯ್ದೆಯ ಪ್ರಕಾರ ಒಂದು ವರ್ಷ ಕಾರಾಗೃಹ ಶಿಕ್ಷೆ ಹಾಗೂ 10 ಸಾವಿರ ರೂ ದಂಡ ವಿಧಿಸುತ್ತಿದೆ. ಈ ರೀತಿ ಈಗಾಗಲೇ ರೈತರಿಗೆ ಕೋರ್ಟ್ ಶಿಕ್ಷೆ ನೀಡಿದ್ದು, ಕೆಲ ರೈತರು ಹೈ ಕೋರ್ಟ್ನಿಂದ ತಡೆಯಾಜ್ಞೆ ಪಡೆದು ಜಾಮೀನಿನ ಮೇಲೆ ಹೊರ ಬಂದಿದ್ದಾರೆ.
ಸಾಗರ ಆವಿನಹಳ್ಳಿಯ ನಿವಾಸಿ ಗೋರು ಮನೆಯ ಗಣಪತಿ ಭಟ್ಟ ಹಾಗೂ ಮಂಜುನಾಥ ಎಂಬ ನಿರಾಶ್ರಿತ ರೈತರು ಶಿಕ್ಷೆಗೆ ಒಳಗಾಗಿ ಸದ್ಯ ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಶರಾವತಿ ಅಣೆಕಟ್ಟು ಕಟ್ಟಿದಾಗ ನಿರಾಶ್ರಿತರಾದವರಿಗೆ ಅರಣ್ಯ ಪ್ರದೇಶದಲ್ಲಿ ನೀಡಿದ ಭೂಮಿಯಲ್ಲಿ ಉಳುಮೆ ಮಾಡಿಕೊಂಡು ಹೋಗುತ್ತಿದ್ದಾರೆ. ಅರಣ್ಯ ಇಲಾಖೆಯವರು ಹಿಂದೆ ಮುಳುಗಡೆ ನಿರಾಶ್ರಿತರಿಗೆ ನೀಡಿದ ಭೂಮಿಯನ್ನು ಅರಣ್ಯ ಭೂಮಿ ಎಂದು ನಮೂದು ಮಾಡಿಕೊಂಡು ಅರಣ್ಯ ಪ್ರದೇಶ ಒತ್ತುವರಿ ಎಂದು ಕೇಸು ಹಾಕುತ್ತಿದೆ.
ಸರ್ಕಾರವೇ ನೀಡಿದ ಭೂಮಿಯನ್ನ ಸರ್ಕಾರದವರೆ ಒತ್ತುವರಿ ಎಂದು ಕೇಸು ದಾಖಲಿಸಿ, ಜೈಲಿಗೆ ಕಳುಹಿಸುತ್ತಿದ್ದಾರೆ. ಹೇಗೋ ಹೈ ಕೊರ್ಟ್ ನಲ್ಲಿ ಜಾಮೀನು ಪಡೆದು ಹೊರ ಬಂದಿದ್ದೆವೆ. ಮುಳುಗಡೆ ಜನ ನಾವು, ನಮಗೆ ಸರ್ಕಾರವೇ ಈ ರೀತಿ ಆಜ್ಞೆ ಹೊರಡಿಸಿ, ನಮ್ಮ ಸಾವು ಬಯಸುತ್ತಿದೆ ಎಂದು ಶಿಕ್ಷೆಗೆ ಗುರಿಯಾದ ಗಣಪತಿ ಭಟ್ ಕಣ್ಣಿರು ಹಾಕುತ್ತಾರೆ.
ಭೂಮಿ ಇದ್ದರೂ ಇಲ್ಲದಂತಾದ ಪರಿಸ್ಥಿತಿಯನ್ನ ಇಲ್ಲಿನ ನಿವಾಸಿಗಳು ಅನುಭವಿಸುತ್ತಿದ್ದಾರೆ. ಇಂತಹದರಲ್ಲಿ ಜನ ಬೆಂಗಳೂರು ಕೋರ್ಟ್ ಗೆ ಹೋಗಲು ಕನಿಷ್ಟ ಟ್ರೈನ್ ಚಾರ್ಜ್ ಗೂ ಹಣ ಇಲ್ಲದೆ ಪರದಾಡುತ್ತಾರೆ. ಇಂತಹವರ ವಿರುದ್ದ ಕೋರ್ಟ್ ತೆರವಿನ ಜೊತೆ ಶಿಕ್ಷೆಯನ್ನು ಸಹ ನೀಡುತ್ತಿದೆ. ಈಗಾಗಲೇ ಈ ಭಾಗದ 18 ಜನರಿಗೆ ನೋಟಿಸ್ ನೀಡಿ ಬೆಂಗಳೂರು ವಿಶೇಷ ಕೋರ್ಟ್ ನಲ್ಲಿ ಪ್ರಕರಣಗಳು ನಡೆತುತ್ತಿವೆ.
ನಗರ ಪ್ರದೇಶಗಳಲ್ಲಿ ನಡೆಯುವ ಭೂ ಒತ್ತುವರಿಯನ್ನು ತಡೆಗಟ್ಟಲು ಯಡಿಯೂರಪ್ಪ ಸರ್ಕಾರದ ಅವಧಿಯಲ್ಲಿ, ಸರ್ಕಾರಿ ಭೂ ಕಬಳಿಕೆ ನಿಷೇಧ ಕಾಯ್ದೆ ಜಾರಿಗೆ ತರಲಾಯಿತು. ಇದೇ ಕಾಯ್ದೆಯನ್ನು ಅಧಿಕಾರಿಗಳು ಎಲ್ಲಾ ಕಡೆಯಲ್ಲೂ ಅಳವಡಿಸಿಕೊಂಡು, ರೈತರ ಮೇಲೆ ಕೇಸ್ ಹಾಕುತ್ತಿದ್ದಾರೆ. ರಾಜ್ಯ ಸರ್ಕಾರ ಕಾಯ್ದೆಯ ಕುರಿತು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕಿದೆ.