ಶಿವಮೊಗ್ಗ : ಕೆಪಿಎಸ್‌ಸಿ 2017-18ರ ಅಧಿಸೂಚನೆ ಅಡಿ ಆಯ್ಕೆಯಾದ ಎಫ್ಡಿಎ ಹಾಗೂ ಎಸ್ಡಿಎ ಅಭ್ಯರ್ಥಿಗಳ ನೇಮಕಾತಿ ಪ್ರಕ್ರಿಯೆ ತಡೆಹಿಡಿದಿರುವ ಆದೇಶ ತೆರವುಗೊಳಿಸಿ ಕೂಡಲೇ ನೇಮಕಾತಿ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿ 2017-18ರ ಅಧಿಸೂಚನೆಯ ಅಡಿ ಆಯ್ಕೆಯಾದ ಎಫ್ಡಿಎ ಹಾಗೂ ಎಸ್ಡಿಎ ನೊಂದ ಅಭ್ಯರ್ಥಿಗಳಿಂದ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಕೆಪಿಎಸ್‌ಸಿ ವತಿಯಿಂದ 2017-18ರ ಅವಧಿಯಲ್ಲಿ ಎಸ್ಡಿಎ ಹಾಗೂ ಎಫ್ಡಿಎ ನೇಮಕಾತಿಯ 1,812 ಹುದ್ದೆಗೆ ಅಧಿಸೂಚನೆ ಹೊರಡಿಸಲಾಗಿತ್ತು. ಅದರಲ್ಲಿ ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಜುಲೈ 2020 ಅಂತಿಮ ಆಯ್ಕೆ ಪಟ್ಟಿ ಹಾಗೂ ಆಯ್ಕೆಯಾದ ಅಭ್ಯರ್ಥಿಗಳಿಗೆ ಇಲಾಖೆ ಹಂಚಿಕೆ ಮಾಡಿ ಇಲಾಖೆಗಳಿಗೆ ನೇಮಕಾತಿ ಹಾಗೂ ಮುಂದಿನ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಅಭ್ಯರ್ಥಿಗಳಿಗೆ ಸ್ಥಳ ನಿಯೋಜನೆಗೊಳಿಸಿ ಕರ್ತವ್ಯಕ್ಕೆ ಹಾಜರುಪಡಿಸಿಕೊಳ್ಳುವಂತೆ ಸರ್ಕಾರ ಆದೇಶಿಸಿತ್ತು.
ಆದರೆ, ಕೊರೊನಾ ಹಿನ್ನೆಲೆ ಹಣಕಾಸು ಇಲಾಖೆ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಹಿನ್ನೆಲೆ ಹಣಕಾಸಿನ ಸಂಕಷ್ಟ ಸರಿದೂಗಿಸುವ ಸಲುವಾಗಿ ನೇಮಕಾತಿ ಪ್ರಕ್ರಿಯೆಯನ್ನು ಮುಂದಿನ ಆರ್ಥಿಕ ವರ್ಷದವರೆಗೆ ಸ್ಥಗಿತಗೊಳಿಸುವಂತೆ ಹಾಗೂ ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಕರ್ತವ್ಯಕ್ಕೆ ಹಾಜರಾಗಲು ಆದೇಶ ನೀಡದಂತೆ ಇಲಾಖೆಗಳಿಗೆ ಸರ್ಕಾರದಿಂದ ಆದೇಶ ನೀಡಲಾಗಿದೆ. ಆದರೆ, ಕೆಲ ಇಲಾಖೆಗಳು ಸರ್ಕಾರವು ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಳಿಸುವ ಆದೇಶ ಹೊರಡಿಸಿದ ನಂತರವೂ ಕೂಡ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿ ಅಭ್ಯರ್ಥಿಗಳನ್ನು ಕರ್ತವ್ಯಕ್ಕೆ ನಿಯೋಜನೆ ಮಾಡಿಕೊಂಡಿವೆ.
ಹಾಗಾಗಿ, 2017-18ರ ಎಫ್ಡಿಎ ಹಾಗೂ ಎಸ್ಡಿಎ ಅಭ್ಯರ್ಥಿಗಳ ನೇಮಕಾತಿ ಪ್ರಕ್ರಿಯೆಗೆ ಹೊರಡಿಸಿರುವ ತಡೆಯಾಜ್ಞೆ ಹಿಂಪಡೆದು ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿ ಕರ್ತವ್ಯಕ್ಕೆ ಹಾಜರು ಪಡಿಸಿಕೊಳ್ಳುವಂತೆ ಆಯಾ ಇಲಾಖೆಗಳಿಗೆ ಸರ್ಕಾರ ಅನುಮತಿ ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.