ಶಿವಮೊಗ್ಗ : ಕೆ ಎಸ್ ಈಶ್ವರಪ್ಪನವರು ನಾಯಿ ಹಾಲಿದ್ದಂತೆ. ಅವರ ಮಗನನ್ನು ಬಿಟ್ಟು ಅವರು ಬೇರೆ ಯಾರಿಗೂ ಅಧಿಕಾರ ಕೊಡಿಸುವುದಿಲ್ಲ ಎಂದು ಕೆಪಿಸಿಸಿ ನೂತನ ವಕ್ತಾರ ಬೇಳೂರು ಗೋಪಾಲಕೃಷ್ಣ, ಜಿಲ್ಲಾ ಉಸ್ತುವಾರಿ ಸಚಿವರ ಆಡಳಿತ ವೈಖರಿಯನ್ನು ಈ ರೀತಿ ಕಿಚಾಯಿಸಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಭೂ ಸುಧಾರಣೆ ಕಾಯ್ದೆಗಳ ತಿದ್ದುಪಡಿ ವಿಚಾರದಲ್ಲಿ ರಾಜ್ಯದ ಮುಖ್ಯಮಂತ್ರಿಯಿಂದ ಹಿಡಿದು ಅವರ ಮಕ್ಕಳು, ಆರ್. ಅಶೋಕ್ ಅವರಂತಹ ಸಚಿವರು, ಕಾರ್ಪೊರೇಟ್ ಕಂಪನಿಗಳ ಗುಲಾಮರಾಗಿದ್ದಾರೆ. ಯಡಿಯೂರಪ್ಪನವರು ರಾಜ್ಯದ ರೈತ ನಾಯಕ ಅಂತಾ ಹೇಳಿಕೊಂಡು ಓಡಾಡುತ್ತಿದ್ದಾರೆ. ಅವರು ರೈತರ ನಾಯಕರಲ್ಲ, ಮಂಡ್ಯದಿಂದ ರೈತರು ಬೆಳೆದ ನಿಂಬೆಹಣ್ಣು ಮಾರಲು ಬಂದವರು. ಇಂದು ಕಾರ್ಪೊರೇಟ್ ಕಂಪನಿಗಳ ಗುಲಾಮರಾಗಿದ್ದಾರೆ ಎಂದು ರಾಜ್ಯ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ನಮ್ಮ ಸರ್ಕಾರ ಬಂದರೆ 24 ಗಂಟೆಗಳಲ್ಲಿ ಗೋ ಹತ್ಯೆ ನಿಷೇಧ ಮಾಡುತ್ತೇವೆ ಎಂದು ವಾಗ್ಧಾನ ಮಾಡಿದ್ದರು. ಆದರೆ, ಆಡಳಿತಕ್ಕೆ ಬಂದು ಇಷ್ಟು ದಿನಗಳಾದ್ರೂ ನಿಷೇಧ ಏಕೆ ಮಾಡಿಲ್ಲ ಎಂದು ಪ್ರಶ್ನಿಸಿದರು. ಗೋಹತ್ಯೆ ಮಾಡಲು ಇವರಿಗೆ ಇಷ್ಟವಿಲ್ಲ, ಅಲ್ಲಲ್ಲಿ ದೊಂಬಿಯಾಗಬೇಕು, ಗಲಾಟೆ ಯಾಗಬೇಕು, ಮುಂದೆ ಇದರಿಂದ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಬೇಕು.
ಹಾಗಾಗಿ, ಇವೆಲ್ಲ ಮಾಡುತ್ತಿದ್ದಾರೆ. ಇದರ ಬಗ್ಗೆ ತುಟಿಕ್ಪಿಟಿಕ್ ಎನ್ನದ ಈಶ್ವರಪ್ಪ ಹಾಗೂ ಬಿಜೆಪಿಗರು ನರವಿಲ್ಲದ ನಾಯಕರು, ಎಲ್ಲರೂ ಸೀರೆ ಉಟ್ಟುಕೊಳ್ಳಬೇಕು ಎಂದು ಕೆಂಡ ಕಾರಿದರು. ಗೋಹತ್ಯೆ ಮಾಡಿದವರಿಗೆ ನೀವು ಬೇಕಾದ್ರೆ ಶಿಕ್ಷೆ ಕೊಡಿ, ನಾವೇನು ಬೇಡ ಎನ್ನುವುದಿಲ್ಲ. ಆದರೆ, ನೀವು ವೋಟ್ ಬ್ಯಾಂಕ್ ರಾಜಕಾರಣ ಮಾಡುವುದನ್ನು ನಿಲ್ಲಿಸಬೇಕು ಎಂದರು. ಯಡಿಯೂರಪ್ಪ ಸರ್ಕಾರಕ್ಕೆ ಧಮ್ ಇಲ್ಲ, ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗಿಲ್ಲ, ಸಂಪೂರ್ಣ ಸರ್ಕಾರ ಮುಳುಗಡೆಯಾಗಿದೆ ಎಂದರು.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ಮತ್ತು ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಅವರು ಇಂತಹ ಹೇಳಿಕೆಗಳನ್ನು ಕೊಡುವುದನ್ನು ಬಿಡಬೇಕು ಎಂದು ಎಚ್ಚರಿಸಿದರು. ರಾಜ್ಯ ಸರ್ಕಾರದಲ್ಲಿ ಯಡಿಯೂರಪ್ಪನವರ ಮಾತಿಗೆ ನಯಾ ಪೈಸೆ ಬೆಲೆ ಇಲ್ಲ.
ಬಿಹಾರ ಚುನಾವಣೆ ಆದ ನಂತರ ಯಡಿಯೂರಪ್ಪನವರು ಸಹ ಉಳಿಯಲ್ಲ ಎಂದು ಬಿಜೆಪಿ ಪತನದ ಹಾದಿ ತೋರಿಸಿದರು. ಇದೇ ವೇಳೆ ಕೆಪಿಸಿಸಿ ವಕ್ತಾರರನ್ನಾಗಿ ನೇಮಿಸಿದ್ದಕ್ಕೆ ಕಾಂಗ್ರೆಸ್ ಮುಖಂಡರಿಗೆ ಕೃತಜ್ಞತೆ ಸಲ್ಲಿಸಿದರು.