ಶಿವಮೊಗ್ಗ : ಜಿಲ್ಲೆಯ ಪ್ರತಿಷ್ಠಿತ ಮೆಗ್ಗಾನ್ ಸರ್ಕಾರಿ ಆಸ್ಪತ್ರೆಯಲ್ಲಿ ಗ್ಲುಕೋಸ್ ಸ್ಟಾಕ್ ಇಲ್ಲದೆ ರೋಗಿಗಳು ಪರದಾಡುವ ಸ್ಥಿತಿ ಎದುರಾಗಿತ್ತು. ಅಲ್ಲದೆ ಗ್ಲುಕೋಸ್ ಅವಶ್ಯಕತೆ ಇರುವ ರೋಗಿಗಳು ಹೊರಗಡೆಯಿಂದ ತಂದು ಚಿಕಿತ್ಸೆ ಪಡೆಯುತ್ತಿದ್ದರು. ಈ ಸಮಸ್ಯೆ ಬಗ್ಗೆ ಈಟಿವಿ ಭಾರತ ವರದಿ ಮಾಡಿದ್ದು, ಎಚ್ಚೆತ್ತ ಮೆಗ್ಗಾನ್ ಆಸ್ಪತ್ರೆ ಇದೀಗ ರೋಗಿಗಳಿಗೆ ಗ್ಲುಕೋಸ್ನ್ನು ಆಸ್ಪತ್ರೆಯಿಂದಲೇ ನೀಡುತ್ತಿದೆ.
ಈ ಬಗ್ಗೆ ಮಾಹಿತಿ ನೀಡಿದ ಮೆಗ್ಗಾನ್ ಭೋದಾನಾಸ್ಪತ್ರೆಯ ನಿರ್ದೇಶಕ ಲೇಪಾಕ್ಷಿರವರು, ನಮ್ಮಲ್ಲಿ ಗ್ಲುಕೋಸ್ ಸ್ಟಾಕ್ ಇರಲಿಲ್ಲ. ಇಂದು ಬೆಳಗ್ಗೆ ಆಸ್ಪತ್ರೆಗೆ ಸ್ಟಾಕ್ ಬಂದಿದೆ. ಮುಂದೆ ರೋಗಿಗಳಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುವುದು ಎಂದರು. ಸಿಮ್ಸ್ ಸಂಸ್ಥೆಗೆ ಔಷಧಗಳು ಎಷ್ಟು ಬೇಕು, ಯಾವ ಔಷಧ ಬೇಕು ಅಂತ ಔಷಧ ಕಂಪನಿಗಳಿಗೆ ಮಾಹಿತಿ ನೀಡಿದರೆ ಅಲ್ಲಿಂದ ಔಷಧಿ ಬರುತ್ತದೆ. ಆದ್ರೆ ಈ ಬಾರಿ ಸಿಮ್ಸ್ ಗೆ ಬಜೆಟ್ ಕಡಿಮೆ ಬಂದಿದ್ದ ಕಾರಣ ಔಷಧಗಳ ಪೂರೈಕೆಯಲ್ಲಿ ಸ್ವಲ್ಪ ವ್ಯತ್ಯಯ ಉಂಟಾಗಿದೆ ಎಂದರು.
ವರದಿಯಿಂದ ಎಚ್ಚೆತ್ತ ಸಿಮ್ಸ್ ಆಡಳಿತ ಮಂಡಳಿಯು 15 ಸಾವಿರ ಗ್ಲುಕೋಸ್ನ್ನು ತರಿಸಿದೆ. ಸದ್ಯ ಬಂದಿರುವ 15 ಸಾವಿರ ಗ್ಲುಕೋಸ್ ಒಂದೆರೆಡು ತಿಂಗಳುಗಳ ಕಾಲ ಸಾಕಾಗುತ್ತದೆ ಎಂದು ಆಡಳಿತ ವಿಭಾಗ ಮಾಹಿತಿ ನೀಡಿದೆ.