ಶಿವಮೊಗ್ಗ: ಸಿಡಿ ರಾಜಕಾರಣ ರಾಜಕೀಯಕ್ಕೊಂದು ಕಳಂಕ ತಂದಿದ್ದು, ಇದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಕೆಟ್ಟ ಪದ್ದತಿ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, "ರಮೇಶ್ ಜಾರಕಿಹೊಳಿ ಅವರು ಡಿ.ಕೆ.ಶಿವಕುಮಾರ್ ಅವರ ಅನೇಕ ಸಿಡಿಗಳು ತಮ್ಮ ಬಳಿ ಇವೆ ಎಂದು ಹೇಳಿದ್ದಾರೆ. ರಮೇಶ್ ಜಾರಕಿಹೊಳಿ ಅವರು ಸಿಡಿ ಕುರಿತು ಸಿಬಿಐ ತನಿಖೆ ಆಗಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಇಂತಹ ದುಷ್ಕೃತ್ಯ ರಾಜ್ಯದಲ್ಲಿ ನಡೆಯಬಾರದು. ಇದರಲ್ಲಿ ಯಾರ್ಯಾರು ತಪ್ಪಿತಸ್ಥರಿದ್ದಾರೋ ಅವರ ವಿರುದ್ದ ಕ್ರಮ ಆಗಬೇಕು ಎಂದು ಸಿಎಂಗೆ ಒತ್ತಾಯಿಸುತ್ತೇನೆ" ಎಂದು ಅವರು ಹೇಳಿದರು.
ವಿರೋಧಿಗಳೂ ಒಪ್ಪುವ ಬಜೆಟ್: "ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಿರ್ಮಲಾ ಸೀತಾರಾಮನ್ ಅವರು, ನಮ್ಮ ವಿರೋಧಿಗಳು ಸಹ ಮೆಚ್ಚುವಂಥ ಬಜೆಟ್ ಮಂಡಿಸಿದ್ದಾರೆ. ಯುವಕರಿಗೆ, ರೈತರಿಗೆ, ಹೆಣ್ಣು ಮಕ್ಕಳಿಗೆ ಹೀಗೆ ಎಲ್ಲರಿಗೂ ಅನುಕೂಲವಾಗುವಂತಹ ಬಜೆಟ್ ಕೊಟ್ಟಿದ್ದಾರೆ. ಶ್ರೀಮಂತ ವರ್ಗದವರಿಂದ ತೆರಿಗೆ ಸಂಗ್ರಹಿಸಿ ಬಡವರಿಗೆ ನೀಡುವ ಬಜೆಟ್ ಇದು. ರಾಜ್ಯಕ್ಕೆ ಭದ್ರಾ ಮೇಲ್ದಂಡೆ ಯೋಜನೆಗೆ ಬಹಳಷ್ಟು ಹಣ ಬೇಕಾಗಿತ್ತು. ಇದು ರಾಷ್ಟ್ರೀಯ ಯೋಜನೆ ಆಗಬೇಕು ಎಂದು ನಾವು ಹಿಂದಿನಿಂದಲೂ ಹೇಳುತ್ತಾ ಬಂದಿದ್ದೆವು. ಅದಕ್ಕೀಗ ಕೇಂದ್ರ ಒಪ್ಪಿಗೆ ನೀಡಿದೆ. ಪ್ರಧಾನಿ ಮೋದಿ ಹಾಗೂ ನಿರ್ಮಲಾ ಸೀತಾರಾಮನ್ ಅವರಿಗೆ ಅಭಿನಂದನೆ ಸಲ್ಲಿಸಲು ಬಯಸುತ್ತೇನೆ" ಎಂದರು.
ರಾಗಿಗುಡ್ಡದಲ್ಲಿ ಶಿವಲಿಂಗ ನಿರ್ಮಾಣ: "ರಾಗಿಗುಡ್ಡದಲ್ಲಿ 14 ಕೋಟಿ ರೂ ವೆಚ್ಚದಲ್ಲಿ 108 ಅಡಿ ಎತ್ತರದ ಶಿವಲಿಂಗ ನಿರ್ಮಾಣ ಮಾಡಲಾಗುವುದು. ಅಭಿವೃದ್ಧಿ ಕಾಮಗಾರಿಗಳ ಆರಂಭಕ್ಕೂ ಮುನ್ನ ಇಂದು ಹೋಮ ಏರ್ಪಡಿಸಲಾಗಿತ್ತು. ಜಿಲ್ಲೆ ಪ್ರವಾಸೋದ್ಯಮ ಸೇರಿದಂತೆ ಧಾರ್ಮಿಕ ಚಟುವಟಿಕೆಗಳಿಗೆ ರಾಜ್ಯದಲ್ಲೇ ಪ್ರಖ್ಯಾತಿ ಪಡೆದುಕೊಂಡಿದೆ. ರಾಗಿಗುಡ್ಡದಲ್ಲಿ ಬ್ರಹ್ಮ, ವಿಷ್ಮು, ಮಹೇಶ್ವರರ ದೇವಸ್ಥಾನವಿದ್ದ ಕಾರಣ ಎತ್ತರದ ಶಿವಲಿಂಗವನ್ನು ಪ್ರತಿಷ್ಠಾಪನೆ ಮಾಡಲು ತೀರ್ಮಾನಿಸಲಾಗಿದೆ. ಇದು ಭಕ್ತರ ಬಯಕೆಯೂ ಹೌದು" ಎಂದು ಹೇಳಿದರು.
ಈಗಾಗಲೇ ಸರ್ಕಾರ ಶಿವಲಿಂಗ ಸ್ಥಾಪನೆ ಮಾಡಬೇಕೆಂದು ತೀರ್ಮಾನ ಮಾಡಿದೆ. ಇದಕ್ಕಾಗಿ 14 ಕೋಟಿ ರೂ. ಹಣವನ್ನೂ ಕೂಡ ಬಿಡುಗಡೆ ಮಾಡಿದೆ. ಫೆ. 8 ರಂದು ರಾಜ್ಯದ ಸಿಎಂ ಬಸವರಾಜ ಬೊಮ್ಮಾಯಿ ಅವರು ಇಲ್ಲಿಗೆ ಆಗಮಿಸಿ ಗುದ್ದಲಿ ಪೂಜೆ ನೆರವೇರಿಸಲಿದ್ದಾರೆ. ಜಿಲ್ಲೆಯಲ್ಲಿ ಬಹಳಷ್ಟು ಅಭಿವೃದ್ದಿ ಕೆಲಸಗಳು ಕೂಡಾ ಆಗಿವೆ. ಕುಡಿಯುವ ನೀರು, ಕಟ್ಟಡ, ರಸ್ತೆಗಳು, 87 ಸರ್ಕಾರಿ ಶಾಲೆಗಳು ಈಗ ಖಾಸಗಿ ಶಾಲೆಗಳ ರೂಪ ಪಡೆದು ಸ್ಮಾರ್ಟ್ ಆಗಿದ್ದು ಶೌಚಾಲಯ ಸೇರಿದಂತೆ ಕುಡಿಯುವ ನೀರಿನ ವ್ಯವಸ್ಥೆಯನ್ನೂ ಮಾಡಲಾಗಿದೆ. ನಗರದಲ್ಲಿ ಸುಮಾರು 95 ಸಮುದಾಯ ಭವನಗಳು, ದೇವಾಸ್ಥಾನಗಳನ್ನು ಸಿಎಂ ಉದ್ಘಾಟನೆ ಮಾಡಲಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: ಸಿಡಿ ಪ್ರಕರಣ: ಸಿಬಿಐ ತನಿಖೆ ಕುರಿತು ಸಿಎಂ ಜೊತೆ ಚರ್ಚಿಸಿ ನಿರ್ಧಾರ- ಆರಗ ಜ್ಞಾನೇಂದ್ರ