ಶಿವಮೊಗ್ಗ: ಶ್ವಾನಪ್ರಿಯರೊಬ್ಬರು ತಾವು ಸಾಕಿರುವ ಮುದ್ದಿನ ಶ್ವಾನದ ಹುಟ್ಟುಹಬ್ಬವನ್ನು ಪೆಂಡಾಲ್ ಹಾಕಿಸಿ, ಕೇಕ್ ಕಟ್ ಮಾಡಿ, ಸ್ನೇಹಿತರಿಗೆಲ್ಲ ಬಿರಿಯಾನಿ ಊಟ ಹಾಕಿಸುವ ಮೂಲಕ ಭರ್ಜರಿಯಾಗಿ ಆಚರಿಸಿದರು. ಅಷ್ಟೇ ಅಲ್ಲದೇ, ತಮ್ಮ ಅಚ್ಚುಮೆಚ್ಚಿನ ಶ್ವಾನಕ್ಕೆ ದುಬಾರಿ ಗಿಫ್ಟ್ ಕೂಡಾ ನೀಡಿದ್ದಾರೆ.
ರಾಗಿಗುಡ್ಡದ ನಿವಾಸಿ ಮೊಹಮ್ಮದ್ ಅಯಾಜ್ ಅವರು ಸೈಬೀರಿಯನ್ ಹಸ್ಕಿ ತಳಿಯ ಶ್ವಾನವೊಂದನ್ನು ಸಾಕಿದ್ದಾರೆ. ಅದಕ್ಕೆ ಟೈಸನ್ ಎಂದು ಹೆಸರಿಟ್ಟಿದ್ದಾರೆ. ಜನವರಿ 13ರಂದು ಟೈಸನ್ಗೆ ಮೊದಲ ವರ್ಷದ ಹುಟ್ಟುಹಬ್ಬವಾಗಿತ್ತು.
ಪೆಂಡಾಲ್, ಕೇಕ್, ಚಿಕನ್ ಬಿರಿಯಾನಿ:
ಟೈಸನ್ ಮೊದಲ ವರ್ಷದ ಹುಟ್ಟುಹಬ್ಬಕ್ಕಾಗಿ ಮೊಹಮ್ಮದ್ ಅಯಾಜ್ ಅವರು ರಾಗಿ ಗುಡ್ಡದ ತಮ್ಮ ಮನೆ ಬಳಿ ಪೆಂಡಾಲ್ ಹಾಕಿಸಿದ್ದರು. ಜನವರಿ 13ರ ಸಂಜೆ ಕೇಕ್ ಕಟ್ ಮಾಡಿ, ತಮ್ಮ ಸ್ನೇಹಿತರಿಗೆಲ್ಲ ಚಿಕನ್ ಬಿರಿಯಾನಿ ಊಟ ಹಾಕಿಸಿದ್ದಾರೆ. ಸುಮಾರು 150 ಮಂದಿ ಶ್ವಾನದ ಹುಟ್ಟುಹಬ್ಬದಲ್ಲಿ ಪಾಲ್ಗೊಂಡಿದ್ದರು.
ಟೈಸನ್ಗೆ ದುಬಾರಿ ಗಿಫ್ಟ್:
ಮೆಚ್ಚಿನ ಶ್ವಾನಕ್ಕೆ 13 ಸಾವಿರ ರೂಪಾಯಿಯ ಮೆತ್ತನೆಯ ಹಾಸಿಗೆಯೊಂದನ್ನು ಖರೀದಿಸಿದ್ದಾರೆ. ಟೈಸನ್ ಆರಾಮಾಗಿ ಕೂರಬೇಕು. ಹಾಗಾಗಿ, ಈ ಹಾಸಿಗೆ ತರಿಸಿ ಗಿಫ್ಟ್ ಮಾಡಿದ್ದೇನೆ ಎಂದು ಮೊಹಮ್ಮದ್ ತಿಳಿಸಿದರು.
ಶ್ವಾನಕ್ಕಾಗಿ ಪ್ರತ್ಯೇಕ ಮನೆಯಲ್ಲಿ ವಾಸ:
ಟೈಸನ್ಗಾಗಿ ಮೊಹಮ್ಮದ್ ಅಯಾಜ್ ಅವರು ಮನೆಯವರಿಂದ ಪ್ರತ್ಯೇಕವಾಗಿ ಉಳಿದುಕೊಂಡಿದ್ದಾರೆ. ಶಿವಮೊಗ್ಗ ರೈಲ್ವೆ ನಿಲ್ದಾಣದ ಸಮೀಪದ ಅಮೀರ್ ಅಹಮದ್ ಕಾಲೋನಿಯಲ್ಲಿ ಇವರ ಅಪ್ಪ, ಅಮ್ಮ, ಅಣ್ಣ ಹಾಗು ಅಕ್ಕಂದಿರು ವಾಸವಾಗಿದ್ದಾರೆ.
‘ನಮ್ಮ ಮನೆಯಲ್ಲಿ ನಾಯಿ ಸಾಕಲು ವಿರೋಧವಿದೆ. ಹಾಗಾಗಿ, ರಾಗಿಗುಡ್ಡದಲ್ಲಿ ಮನೆ ಮಾಡಿದ್ದೇನೆ. ಅಲ್ಲಿಯೇ ಟೈಸನ್ ಜೊತೆಗಿರುತ್ತೇನೆ. ನಿತ್ಯ ಮನೆಗೆ ಹೋಗಿ ಎಲ್ಲರನ್ನು ಮಾತನಾಡಿಸಿಕೊಂಡು ಬರುತ್ತೇನೆ. ಅದರೆ ಇಲ್ಲಿ ಬಂದು ಉಳಿದುಕೊಳ್ಳುತ್ತೇನೆ’ ಎಂದು ಅವರು ಹೇಳುತ್ತಾರೆ.
ನಾಯಿ ಪ್ರೀತಿ ಬೆಳೆದಿದ್ದು ಹೇಗೆ?
ಮೊಹಮ್ಮದ್ ಅಯಾಜ್ ಚನ್ನಗಿರಿಯ ಹೊಟೇಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಆಗ ಭಾರಿ ಮಳೆಯಲ್ಲಿ ನೆಂದು ಬಂದ ನಾಯಿಯೊಂದಕ್ಕೆ ಹೊಟೇಲ್ ಬಳಿ ಆಶ್ರಯ ನೀಡಿದ್ದರಂತೆ.
'ನನಗೆ ಪ್ರತಿದಿನ 25 ರೂ. ಕೂಲಿ ಕೊಡುತ್ತಿದ್ದರು. ಆ ಹಣವೆಲ್ಲ ನಾಯಿಯ ಹಾಲು, ತಿಂಡಿಗೆ ಖರ್ಚಾಗುತ್ತಿತ್ತು. ಆ ನಾಯಿ ಎರಡು ಮರಿ ಹಾಕಿತು. ಹೊಟೇಲ್ಗೆ ಬಂದವರಾರೋ ನಾಯಿ ಮರಿಗಳನ್ನು ಕೊಂಡೊಯ್ದಿದ್ದರು. ನಾನು ಚನ್ನಗಿರಿಯ ಬೀದಿ ಬೀದಿ ಹುಡುಕಿದೆ. ಮರಿಗಳು ಸಿಗಲಿಲ್ಲ. ಆಗ ಬಹಳ ಬೇಸರವಾಯಿತು. ಶಿವಮೊಗ್ಗಕ್ಕೆ ಹಿಂತಿರುಗಿದ ನಂತರ ಟೈಲ್ಸ್ ಕೆಲಸ ಮೇಸ್ತ್ರಿಯಾಗಿದ್ದಾರೆ. ಟೈಲ್ಸ್ ಕೆಲಸಕ್ಕೆ ಹೋಗುವಾಗ ಟೈಸನ್ ಅನ್ನು ಬೊಮ್ಮನಕಟ್ಟೆಯಲ್ಲಿರುವ ಕೆನಾಲಲ್ನಲ್ಲಿ (ಶ್ವಾನಗಳ ಕೇರ್ ಸೆಂಟರ್) ಬಿಟ್ಟು ಹೋಗುತ್ತೇನೆ. ಸಂಜೆ ಬರುವಾಗ ಟೈಸನ್ ಮನೆಗೆ ಕರೆದುಕೊಂಡು ಬರುತ್ತೇನೆ. ಟೈಸನ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಕೆಲಸಗಾರರಿಗೆ ರಜೆ ಕೊಟ್ಟಿದ್ದೆ. 150 ಜನ ಸ್ನೇಹಿತರಿಗೆ ಬಿರಿಯಾನಿ ಊಟ ಹಾಕಿಸಿದೆ. ಇವತ್ತು ಕುಟುಂಬದವರಿಗೆ ಊಟದ ವ್ಯವಸ್ಥೆ ಮಾಡಿದ್ದೇನೆ' ಎಂದು ಅವರು ತಿಳಿಸಿದರು.
‘ನಾಯಿ ಸಾಕುವುದು ಬರಿ ಪ್ರತಿಷ್ಠೆಯಾಗಬಾರದು. ಅದಕ್ಕೆ ಒಳ್ಳೆಯ ಆಹಾರ, ಔಷಧೋಪಚಾರ ಮಾಡಬೇಕು. ಪ್ರಾಣಿಗಳ ಬಗ್ಗೆ ಪ್ರೀತಿ ಇರಬೇಕು' ಅನ್ನೋದು ಶ್ವಾನಪ್ರಿಯರಿಗೆ ಮೊಹಮ್ಮದ್ ಹೇಳುವ ಕಿವಿಮಾತು.
ಮೊಹಮ್ಮದ್ ಅಯಾಜ್ ಶ್ವಾನದ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಿರುವುದು ಅವರ ಸ್ನೇಹಿತರ ವಲಯಲ್ಲಿ, ಅಕ್ಕಪಕ್ಕದ ನಿವಾಸಿಗಳು, ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ.