ಶಿವಮೊಗ್ಗ: ರಾಜ್ಯದ ಖಾಸಗಿ ಆಸ್ಪತ್ರೆಗಳ ಹೊರರೋಗಿ ವಿಭಾಗವನ್ನು(ಒಪಿಡಿ) ಬಂದ್ ಮಾಡಿ ವೈದ್ಯರು ನಡೆಸುತ್ತಿರುವ ಪ್ರತಿಭಟನೆಗೆ ಶಿವಮೊಗ್ಗದಲ್ಲಿಯೂ ಬೆಂಬಲ ವ್ಯಕ್ತವಾಗಿದೆ.
ಆಯುರ್ವೇದ ವೈದ್ಯರಿಗೆ ಶಸ್ತ್ರಚಿಕಿತ್ಸೆ ನಡೆಸಲು ಅವಕಾಶ ನೀಡಿರುವ ಕೇಂದ್ರ ಸರ್ಕಾರದ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿ ಖಾಸಗಿ ಆಸ್ಪತ್ರೆಗಳ ಒಪಿಡಿ ಬಂದ್ ಮಾಡಲಾಗಿದೆ. ಪ್ರತಿಭಟನೆ ಹಿನ್ನೆಲೆ ಶಿವಮೊಗ್ಗ ಜಿಲ್ಲೆಯ ಎಲ್ಲಾ 668 ಖಾಸಗಿ ಆಸ್ಪತ್ರೆಗಳ ಒಪಿಡಿಗಳು ಬೆಳಗ್ಗೆ 6 ಗಂಟೆಯಿಂದ ಬಂದ್ ಆಗಿದ್ದು, ಸಂಜೆ 6 ಗಂಟೆಯವರೆಗೂ ಬಂದ್ ಮುಂದುವರೆಯಲಿದೆ.
ಶಲ್ಯ ಮತ್ತು ಶಲಕ್ಯ ವಿಷಯದಲ್ಲಿ ಸ್ನಾತಕೋತ್ತರ ವ್ಯಾಸಂಗ ಮಾಡಿರುವ ಆಯುರ್ವೇದ ವೈದ್ಯರಿಗೆ 39 ಸಾಮಾನ್ಯ ಹಾಗೂ ಕಿವಿ-ಮೂಗು-ಗಂಟಲು, ಶಿರಾ ಮತ್ತು ದಂತ ಸಮಸ್ಯೆಗಳಿಗೆ ಶಸ್ತ್ರಚಿಕಿತ್ಸೆ ನಡೆಸಲು ಅನುಮತಿ ನೀಡಲಾಗಿದೆ. ಇದನ್ನು ವಿರೋದಿಸಿ ಖಾಸಗಿ ಆಸ್ಪತ್ರೆಗಳ ಒಪಿಡಿಗಳನ್ನು ಬಂದ್ ಮಾಡಲಾಗಿದ್ದು, ಒಳರೋಗಿಗಳಿಗೆ ಎಂದಿನಂತೆ ಚಿಕಿತ್ಸೆ ಮುಂದುವರೆದಿದೆ. 108 ಆಂಬುಲೆನ್ಸ್ ಮತ್ತು ಖಾಸಗಿ ಆಂಬುಲೆನ್ಸ್ ಸೇವೆ ಎಂದಿನಂತೆ ಮುಂದುವರೆದಿದೆ. ಮೆಡಿಕಲ್ಗಳು ಸಹ ಎಂದಿನಂತೆ ತೆರೆದಿವೆ.