ಶಿವಮೊಗ್ಗ: ಜಿಲ್ಲೆಯಲ್ಲಿ ಎಷ್ಟೇ ಜಾಗೃತಿ ಮೂಡಿಸಿದರೂ ಅನಗತ್ಯವಾಗಿ ಓಡಾಡುವರ ಸಂಖ್ಯೆ ಕಡಿಮೆ ಆಗುತ್ತಿಲ್ಲ, ಹಾಗಾಗಿ ಜನರು ಬಲವಂತದ ಲಾಕ್ಡೌನ್ಗೆ ಆಸ್ಪದ ನೀಡಬೇಡಿ ಎಂದು ಸಚಿವ ಕೆ ಎಸ್ ಈಶ್ವರಪ್ಪ ಮನವಿ ಮಾಡಿಕೊಂಡಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗ ನಗರದಲ್ಲಿ ಜನರು ಮಾಸ್ಕ್ ಹಾಕಿಕೊಳ್ಳುತ್ತಿಲ್ಲ ಹಾಗೂ ಎಷ್ಟೇ ವಾಹನಗಳನ್ನು ವಶಕ್ಕೆ ಪಡೆದರೂ ಅನಗತ್ಯವಾಗಿ ಓಡಾಡುವುದನ್ನು ಬಿಡುತ್ತಿಲ್ಲ, ಹಾಗಾಗಿ ಬಲವಂತವಾಗಿ ಲಾಕ್ಡೌನ್ ಮಾಡಬೇಕಾ ಎಂಬ ಚಿಂತನೆಯನ್ನು ಮಾಡುತ್ತಿದ್ದೇವೆ. ಈ ಕುರಿತು ಜಿಲ್ಲಾಧಿಕಾರಿ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಸಿಇಒ ಅವರ ಜೊತೆ ಚರ್ಚಿಸಿ ನಾಳೆಯೊಳಗೆ ಶಿವಮೊಗ್ಗದಲ್ಲಿ ಏನು ಮಾಡಬೇಕು ಎನ್ನುವ ತೀರ್ಮಾನವನ್ನು ಹೇಳುತ್ತೇವೆ ಎಂದರು.
ಜನ ಜಾಗೃತರಾಗದೇ ಹೋದರೆ ಸಮಸ್ಯೆ ಹೆಚ್ಚಾಗುತ್ತೆ. ಹಾಗಾಗಿ ನಾಳೆಯೊಳಗೆ ನಮ್ಮ ಜಿಲ್ಲೆಯಲ್ಲಿ ಲಾಕ್ಡೌನ್ ಮಾಡಬೇಕೋ ಬೇಡವೋ ಎನ್ನುವುದನ್ನು ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎನ್ನುವ ಮೂಲಕ ಶಿವಮೊಗ್ಗ ಜಿಲ್ಲೆಯಲ್ಲಿ ಲಾಕ್ಡೌನ್ ಮಾಡುವ ಸುಳಿವನ್ನು ಸಚಿವರು ನೀಡಿದ್ದಾರೆ.