ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಒಡೆತನದ ಶಿಕ್ಷಣ ಸಂಸ್ಥೆಗೆ ಸೇರಿದ ನಾಲ್ಕು ಬಸ್ಗಳಲ್ಲಿ ಡೀಸೆಲ್ ಕಳ್ಳತನ ಮಾಡಲಾಗಿದೆ. ರಾತ್ರಿ ವೇಳೆ ಟ್ಯಾಂಕ್’ನ ಕ್ಯಾಪ್ ತೆಗೆದು 580 ಲೀಟರ್ ಡೀಸೆಲ್ ಕಳವು ಮಾಡಲಾಗಿದೆ. ಸಮೀಪದಲ್ಲೇ ಸೆಕ್ಯೂರಿಟಿಗಳಿದ್ದರೂ ಕಳ್ಳರು ತಮ್ಮ ಕರಾಮತ್ತು ತೋರಿಸಿದ್ದಾರೆ.
ಹೇಗಾಯ್ತು ಘಟನೆ?
ಶಿವಮೊಗ್ಗದ ಸೋಮಿನಕೊಪ್ಪದ ಮೈತ್ರಿ ಅಪಾರ್ಟ್ಮೆಂಟ್ ಬಳಿ ಘಟನೆ ನಡೆದಿದೆ. ಪಿಇಎಸ್ ಶಿಕ್ಷಣ ಸಂಸ್ಥೆಗೆ ಸೇರಿದ ಎರಡು ದೊಡ್ಡ ಬಸ್ ಮತ್ತು ಎರಡು ಮಿನಿ ಬಸ್ಗಳನ್ನು ರಾತ್ರಿ ತಂದು ನಿಲ್ಲಿಸಲಾಗಿತ್ತು. ಬೆಳಗ್ಗೆ ಚಾಲಕ ಬಂದು ಪರಿಶೀಲಿಸಿದಾಗ ಡೀಸೆಲ್ ಟ್ಯಾಂಕ್’ಗಳ ಕ್ಯಾಪ್ ಓಪನ್ ಆಗಿರುವುದು ಬೆಳಕಿಗೆ ಬಂದಿದೆ.
ಎರಡು ಬಸ್ಗಳಲ್ಲಿ ತಲಾ 90 ಲೀಟರ್, ಒಂದು ಬಸ್ನಲ್ಲಿ ಅಂದಾಜು 250 ಲೀಟರ್, ಮತ್ತೊಂದರಲ್ಲಿ ಸುಮಾರು 150 ಲೀಟರ್ ಡೀಸೆಲ್ ಇತ್ತು. 55,454 ರೂ. ಮೌಲ್ಯದ 580 ಲೀಟರ್ ಡಿಸೇಲ್ ಕಳ್ಳತನವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಸಂಬಂಧ ಸೂಕ್ತ ತನಿಖೆ ನಡೆಸುವಂತೆ ವಿನೋಬನಗರ ಠಾಣೆಗೆ ದೂರು ನೀಡಲಾಗಿದೆ.
ಪಿಎಎಸ್ ಶಿಕ್ಷಣ ಸಂಸ್ಥೆಯು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕುಟುಂಬದವರ ಒಡೆತನದ ಟ್ರಸ್ಟ್ ಮಾಲೀಕತ್ವದಲ್ಲಿದೆ. ಸೋಮಿನಕೊಪ್ಪದ ಮೈತ್ರಿ ಅಪಾರ್ಟ್ಮೆಂಟ್ ಬಳಿ ಪ್ರತಿ ದಿನ ಪಿಇಎಸ್ ಕಾಲೇಜಿನ ಬಸ್ಗಳನ್ನು ನಿಲ್ಲಿಸಲಾಗುತ್ತದೆ. ಆ ಭಾಗದಿಂದ ವಿದ್ಯಾರ್ಥಿಗಳು, ನರ್ಸಿಂಗ್ ವಿದ್ಯಾರ್ಥಿಗಳನ್ನು ಕರೆತರಲು ಈ ಬಸ್ಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿತ್ತು.
ಇದನ್ನೂ ಓದಿ: 'No Vaccine, No Ration, No Pension' ನಿಯಮ ಸರ್ಕಾರದ ನಿರ್ಧಾರವಲ್ಲ: ಸಚಿವ ಸುಧಾಕರ್