ಶಿವಮೊಗ್ಗ: ದೇಶದಲ್ಲಿ ಕೊರೊನಾ ಮಹಾಮಾರಿಯ 2ನೇ ಅಲೆ ವ್ಯಾಪಕವಾಗಿ ಹರಡುತ್ತಿರುವುದರ ಪರಿಣಾಮ ಸಾಕಷ್ಟು ಜನ ಬೆಡ್ ಸಿಗದೇ, ಆಕ್ಸಿಜನ್ ಸಿಗದೇ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ಈ ವೈರಸ್ ದೇಶಕ್ಕೆ ಮಾರಕವಾಗಿ ಪರಿಣಮಿಸಿದೆ. ಈ ನಿಟ್ಟಿನಲ್ಲಿ ಕೋವಿಡ್ ತೊಲಗಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಇಂದು ಧನ್ವಂತರಿ ಹೋಮ ನಡೆಸಿದ್ದಾರೆ.
ನಗರದ ಶುಭಮಂಗಳ ಸಮುದಾಯ ಭವನದ ಗಣಪತಿ ದೇವಾಲಯದ ಮುಂಭಾಗದ ಹಾಲ್ಗೆ ಕುಟುಂಬ ಸಮೇತರಾಗಿ ಹೋಗಿ ಹೋಮ ನೆರವೇರಿಸಿದ್ದಾರೆ. ಭಾರತೀಯ ಸಂಸ್ಕೃತಿಯಲ್ಲಿ ಧನ್ವಂತರಿಯನ್ನು ಆರ್ಯುವೇದದ ದೇವತೆ ಎಂದು ಪರಿಗಣಿಸಲಾಗುತ್ತದೆ. ಆರ್ಯುವೇದದ ಚಿಕಿತ್ಸೆ ಬಹಳ ಮಹತ್ವವನ್ನು ಹೊಂದಿದೆ. ಹೀಗಾಗಿ ಸಚಿವರು ತಮ್ಮ ಕುಟುಂಬದ ಸಮೇತ ಹೋಮ ನಡೆಸಿದ್ದಾರೆ ಎನ್ನಲಾಗಿದೆ.
ರವೀಂದ್ರ ನಗರ ಗಣಪತಿ ದೇವಾಲಯದ ಮುಖ್ಯ ಅರ್ಚಕ ಅ.ಪ. ರಾಮಭಟ್ಟ ಅವರ ನೇತೃತ್ವದಲ್ಲಿ ನಡೆದ ಹೋಮಕ್ಕೆ ಸಚಿವ ಈಶ್ವರಪ್ಪನವರ ಪತ್ನಿ ಜಯಲಕ್ಷ್ಮಿ, ಪುತ್ರ ಕೆ.ಈ. ಕಾಂತೇಶ್, ಸೂಸೆ ಹಾಗೂ ಮಕ್ಕಳು, ಮೊಮ್ಮಕ್ಕಳು ಸೇರಿ ಪೂರ್ಣಾಹುತಿಯನ್ನು ನೀಡಿದರು. ನಾಡಿದ್ದು ಪ್ರಾರಂಭವಾಗುವ ಕೋವಿಡ್ ಕೇರ್ ಸೆಂಟರ್ ಉತ್ತಮವಾಗಿ ಕಾರ್ಯನಿರ್ವಹಿಸಲಿ ಹಾಗೂ ರೋಗ ಬೇಗ ದೂರವಾಗಲಿ ಎಂದು ಹೋಮ ನಡೆಸಿರುವುದಾಗಿ ಅವರು ತಿಳಿಸಿದ್ದಾರೆ.