ಶಿವಮೊಗ್ಗ: ನಗರದ ಸರ್ವ ಜನೋಪಯೋಗಿ ಹಾಗೂ ಪ್ರತಿಷ್ಠಿತ ಕುವೆಂಪು ರಂಗಮಂದಿರವನ್ನು ಸ್ಮಾರ್ಟ್‍ಸಿಟಿ ಯೋಜನೆಯಡಿ ಅಭಿವೃದ್ಧಿಪಡಿಸಲು ಸಕ್ಷಮ ಪ್ರಾಧಿಕಾರ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸುವುದಾಗಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಹೇಳಿದರು.
ಅವರು ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕುವೆಂಪು ರಂಗಮಂದಿರ ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ರಂಗಮಂದಿರದ ಒಳಗೆ ಹೊಸದಾದ ಆಸನಗಳನ್ನು ಅಳವಡಿಸಲು, ಶೌಚಾಲಯಗಳನ್ನು ದುರಸ್ತಿಗೊಳಿಸಲು, ಕಟ್ಟಡದ ಸುಣ್ಣ-ಬಣ್ಣ ಮಾಡಿಸಿ ಅಂದಗೊಳಿಸಲು ಉದ್ದೇಶಿಸಲಾಗಿದೆ. ಅಲ್ಲದೇ ಹಣಕಾಸಿನ ಲಭ್ಯತೆಯನ್ನು ನೋಡಿಕೊಂಡು ರಂಗಮಂದಿರದ ವೇದಿಕೆಯನ್ನು ಅತ್ಯಾಧುನಿಕವಾಗಿ ಅಭಿವೃದ್ಧಿಪಡಿಸಲಾಗುವುದು. ಅಂತೆಯೇ ಧ್ವನಿವರ್ಧಕವೂ ಶೃತಿಸಹ್ಯವಾಗಿರುವಂತೆ ನೋಡಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಕುವೆಂಪು ರಂಗಮಂದಿರದ ಹೊರ ಭಾಗದಲ್ಲಿ ನಿರ್ಮಿಸಿರುವ ಬಯಲು ರಂಗಮಂದಿರದ ವೇದಿಕೆಯ ಮೇಲ್ಭಾಗದಲ್ಲಿ ಹೈ ಟೆನ್ಷನ್ ವಿದ್ಯುತ್ ತಂತಿಗಳು ಹಾದು ಹೋಗಿದ್ದು, ಕಾರ್ಯಕ್ರಮ ನಡೆಸಲು ತೀವ್ರ ಅಡಚಣೆ ಉಂಟಾಗಿರುವುದು ತಿಳಿದುಬಂದಿದೆ. ಕೂಡಲೇ ಆ ವಿದ್ಯುತ್ ತಂತಿಗಳನ್ನು ತೆರೆವುಗೊಳಿಸುವಂತೆ ಮೆಸ್ಕಾಂ ಅಭಿಯಂತರರಿಗೆ ಸೂಚಿಸಿದರು. ಜೊತೆಗೆ ಕುವೆಂಪು ರಂಗಮಂದಿರದ ಬಾಡಿಗೆಯಿಂದ ಕಡಿಮೆ ಪ್ರಮಾಣದ ಆದಾಯ ಬರುತ್ತಿದ್ದು, ನಿರ್ವಹಣೆ ಕಷ್ಟಸಾಧ್ಯವಾಗಿರುವ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಗಳ ಕಾರ್ಯಕ್ರಮಗಳಿಗೆ ದರ ಇಳಿಸಿ, ಖಾಸಗಿ ಕಾರ್ಯಕ್ರಮಗಳಿಗೆ ಶೇ.10 ರಿಂದ 25 ರಷ್ಟು ಶುಲ್ಕ ಹೆಚ್ಚಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಹೆಚ್.ಉಮೇಶ್ ಅವರಿಗೆ ಸೂಚಿಸಿದರು.