ಶಿವಮೊಗ್ಗ : ರಾಜ್ಯ ಸರ್ಕಾರದ ಬಗ್ಗೆ ನನಗೆ ಅಸಮಾಧಾನವಿದೆ ಎಂದು ಹೇಳಿದ ದೇವೇಗೌಡರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಶಿವಮೊಗ್ಗ ಹೇಳಿದ್ದಾರೆ.
ಮೈತ್ರಿ ಸರ್ಕಾರದ ವಿರುದ್ದ ಕೇವಲ ದೇವೇಗೌಡರಿಗಲ್ಲ ಬದಲಿಗೆ ರಾಜ್ಯದ 7 ಕೋಟಿ ಜನರಿಗೂ ಅಸಮಾಧಾನವಿದೆ. ಈ ಸರ್ಕಾರದ ಬಗ್ಗೆ ಜನರಿಗೆ, ಜೆಡಿಎಸ್, ಕಾಂಗ್ರೆಸ್ನವರಿಗೂ ಅಸಮಾಧಾನವಿದೆ. ರಾಜ್ಯದಲ್ಲಿ ಮೈತ್ರಿ ಸರ್ಕಾರ ಇಲ್ಲ, ರಾಜ್ಯದಲ್ಲಿ ಗೊಂದಲದ ಸರ್ಕಾರವಿದೆ ಎಂದು ಟೀಕಿಸಿದರು.
ಕಾಂಗ್ರೆಸ್ ಜೆಡಿಎಸ್ನ ಗೊಂದಲ ಕುಮಾರಸ್ವಾಮಿ ಮುಖ್ಯಮಂತ್ರಿಯಾದ ದಿನದಿಂದಲೂ ಶುರುವಾಗಿದೆ. ಕಾಂಗ್ರೆಸ್ನವರು ಮೊದಲು ಬೇಷರತ್ ಬೆಂಬಲ ಕೊಡ್ತೇವಿ ಎಂದಿದ್ರು. ಕುಮಾರಸ್ವಾಮಿ ಸಿಎಂ ಆದಾಗಿನಿಂದಲೂ ಬರೀ ಕಣ್ಣೀರು ಹಾಕುವುದು ಬಿಟ್ಟರೆ ಬೇರೇನೂ ಮಾಡಿಲ್ಲ, ಸದ್ಯ ಕಾಂಗ್ರೆಸ್ ಮೇಲೆ ಷರತ್ತಿನ ಮೇಲೆ ಷರತ್ತು ಹಾಕುತ್ತಿದ್ದಾರೆ ಎಂದು ಸಿಎಂ ವಿರುದ್ದ ಗುಡುಗಿದರು.
ಇತ್ತ ಕಾಂಗ್ರೆಸ್ನವರೇ ದೇವೇಗೌಡರನ್ನು ಸೋಲಿಸಿದ್ದು ಎಂದು ಸ್ವತಃ ಗೌಡರೆ ಹೇಳಿದ್ದಾರೆ, ದೊಸ್ತಿ ಸರ್ಕಾರ ಬಹಿರಂಗವಾಗಿ ಬಡಿದಾಡಿಕೊಳ್ಳುತ್ತಿದೆ. ಎಲ್ಲರೂ ರಾಜ್ಯವನ್ನು ಲೂಟಿ ಮಾಡಲು ನಿಂತಿದ್ದಾರೆ. ಜನರಂತೂ ಯಾವಾಗ ಈ ಮೈತ್ರಿ ಸರ್ಕಾರ ಹಾಳಾಗಿ ಹೋಗುತ್ತೆ, ಯಡಿಯೂರಪ್ಪ ಯಾವಾಗ ಸಿಎಂ ಆಗ್ತಾರೆ ಅಂತಾ ಕಾಯ್ತಿದಾರೆ, ಮೈತ್ರಿ ಸರ್ಕಾರ ಬಹಳ ದಿನ ಬದುಕಲ್ಲ ಎಂದು ಭವಿಷ್ಯ ನುಡಿದರು.
ಬೇಷರತ್ ಎಂದರೆ ಅರ್ಥವೇನು ಎಂದು ಪ್ರಶ್ನೆ ಮಾಡಿದ ಈಶ್ವರಪ್ಪ, ಮಧ್ಯಂತರ ಚುನಾವಣೆ ನಡೆದರೇ ಬಿಜೆಪಿ 150 ಸ್ಥಾನಗಳನ್ನು ಗೆಲ್ಲಲಿದೆ, ಆದ್ರೆ ರಾಜ್ಯದ ಜನರು ಬಿಜೆಪಿಗೆ 180 ಸ್ಥಾನಗಳಲ್ಲಿ ಗೆಲ್ಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ದೇವೇಗೌಡರಿಗೆ ನಾನು ಅಭಿನಂದನೆ ಸಲ್ಲಿಸುತ್ತೆನೆ, ಯಾಕಂದ್ರೆ ರಾಜ್ಯದ 7 ಕೋಟಿ ಜನರ ಭಾವನೆಯನ್ನು ಅವರು ಹೇಳಿದ್ದಾರೆ ಎಂದರು.