ಶಿವಮೊಗ್ಗ: ಆತ ಕೊರೊನಾ ಸೋಂಕಿನ ಜೊತೆ ಹೋರಾಡಿ ಬದುಕು ಮುಗಿಸಿದವರ ಶವಗಳ ಅಂತ್ಯಕ್ರಿಯೆ ನೆರವೇರಿಸುತ್ತಿದ್ದ. ಹೀಗೆ ಅಂತ್ಯಕ್ರಿಯೆ ನಡೆಸುತ್ತಾ ತನಗೂ ಈ ಮಾರಕ ಕಾಯಿಲೆ ಅಂಟಿಕೊಳ್ಳುತ್ತೆ ಅಂತಾ ಆತ ಭಾವಿಸಿರಲಿಲ್ಲ. ಆದ್ರೆ ರೋಗ ಆತನಿಗೂ ವಕ್ಕರಿಸಿಬಿಡ್ತು. ಕೊನೆಗೂ ಆತನೂ ಕೊನೆಯುಸಿರೆಳೆದ. ಈಗ ಪತಿ, ಮಕ್ಕಳನ್ನೂ ಕಳೆದುಕೊಂಡ ಪತ್ನಿ ಜೀವನ ನಿರ್ವಹಣೆಗೆ ಪರಿತಪಿಸುತ್ತಿದ್ದಾರೆ. ಅದಾಗಲೇ ಪಾಲಿಕೆ ಇವರಿಗೆ ನೆರವಾಗುವುದಾಗಿ ಭರವಸೆ ನೀಡಿದೆ. ಆದರೆ ಸರ್ಕಾರ ಈತನನ್ನು ಕೊರೊನಾ ವಾರಿಯರ್ ಎಂದು ಗುರುತಿಸಲು ಮೀನಾಮೇಷ ಎಣಿಸುತ್ತಿದೆ.
ವರ್ಷದ ಹಿಂದೆ ಶಿವಮೊಗ್ಗದ ಅನಿಲ ಚಿತಾಗಾರದಲ್ಲಿ ಪಾಪನಾಯಕ ಎಂಬ 38 ವರ್ಷದ ವ್ಯಕ್ತಿ ಕೆಲಸಕ್ಕೆ ಸೇರಿಕೊಂಡಿದ್ದ. ಈತ ಈಗ ಬದುಕುಳಿದಿಲ್ಲ. ಹೊರ ಗುತ್ತಿಗೆ ಆಧಾರದ ಈತನ ನೇಮಕವಾಗಿತ್ತು. ತಿಂಗಳಿಗೆ 14 ಸಾವಿರ ರೂಪಾಯಿ ಸಂಬಳ ಪಡೆದು ಅನುಕೂಲಕರ ಜೀವನ ನಡೆಸಬಹುದು ಅನ್ನೋದು ಇವರ ಕುಟುಂಬದ ಲೆಕ್ಕಾಚಾರವಾಗಿತ್ತು. ಇವರ ಇಬ್ಬರೂ ಮಕ್ಕಳು ದಿವ್ಯಾಂಗರಾಗಿದ್ದರಿಂದ ಅವರ ಚಿಕಿತ್ಸೆ ಕೂಡ ಮಾಡಿಸಬೇಕು ಎಂದು ಪಾಪನಾಯಕ ಶ್ರಮಿಸುತ್ತಿದ್ದ. ಆದರೆ, ವಿಧಿಯಾಟ ಬೇರೆಯೇ ಆಗಿತ್ತು.
ಕೊರೊನಾದಿಂದಾಗಿ ಜಿಲ್ಲೆಯಲ್ಲಿ ಪ್ರತಿ ದಿನ ಮೃತಪಡುತ್ತಿದ್ದ ಸೋಂಕಿತರ ಪೈಕಿ ಮೂರ್ನಾಲ್ಕು ಮಂದಿಯನ್ನಾದರೂ ಅನಿಲ ಚಿತಾಗಾರದಲ್ಲಿ ಸುಡಲಾಗುತ್ತಿತ್ತು. ಇದರ ಕ್ರಿಯೆಯನ್ನು ಇವರೇ ಮಾಡುತ್ತಿದ್ದರು. ಹೀಗೆ ಸೋಂಕು ಶುರುವಾದಾಗಿನಿಂದ ಪಾಪನಾಯಕ ಸುಮಾರು 100ಕ್ಕೂ ಹೆಚ್ಚು ಶವಗಳ ದಹನ ಕಾರ್ಯ ಮಾಡಿದ್ದಾರೆ. ಆದರೆ ಅದೇ ಕಾರ್ಯ ಅವರ ಜೀವಕ್ಕೆ ಮುಳುವಾಯಿತು. ಪಾಪನಾಯಕ ಕೊರೊನಾ ಸೋಂಕಿನಿಂದ ಕಣ್ಣು ಮುಚ್ಚಿದರು.
ಇವರು ಸಾಯುವುದಕ್ಕಿಂತ ಒಂದು ತಿಂಗಳ ಮುಂಚೆ ಇವರ ಮಕ್ಕಳು ಕೂಡ ಮೃತಪಟ್ಟಿದ್ದಾರೆ. ಇದೀಗ ಪತ್ನಿ ಒಂಟಿ ಜೀವನ ನಡೆಸುತ್ತಿದ್ದಾರೆ.
ಸರ್ಕಾರದ ಕೆಲ ನಿಯಮಾವಳಿಗಳು ಇವರನ್ನು ಕೊರೊನಾ ವಾರಿಯರ್ ಎಂದು ಘೋಷಿಸುವಲ್ಲಿ ಅಡ್ಡಿಯಾಗುತ್ತಿವೆ. ಆದರೆ ಸರ್ಕಾರ ಇದನ್ನು ವಿಶೇಷ ಪ್ರಕರಣವೆಂದು ಭಾವಿಸಿ ಪತಿಯನ್ನು ಕೊರೊನಾ ವಾರಿಯರ್ ಎಂದು ಪರಿಗಣಿಸಬೇಕು. ಹೀಗೆ ಪರಿಗಣಿಸಿದ್ದೇ ಆದರೆ ಪಾಪನಾಯಕ ಅವರ ಪತ್ನಿಗೆ ಸೂಕ್ತ ಪರಿಹಾರ ಹಾಗೂ ಸೌಲಭ್ಯಗಳು ದೊರಕುತ್ತವೆ. ಗಂಡ, ಮಕ್ಕಳಿಲ್ಲದ ಒಂಟಿ ಜೀವಕ್ಕೆ ಆಸರೆ ಕಲ್ಪಿಸಬೇಕು ಅನ್ನೋದು ಪತ್ನಿ ಸವಿತ ಅವರ ಮನವಿಯಾಗಿದೆ.
ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ಸವಿತಾಗೆ 3 ಲಕ್ಷ ರೂಪಾಯಿ ಪರಿಹಾರ ಧನ ಮತ್ತು ಹೊರ ಗುತ್ತಿಗೆ ಆಧಾರದಲ್ಲಿ ಕೆಲಸ ನೀಡಲು ಮಹಾನಗರ ಪಾಲಿಕೆ ನಿರ್ಣಯ ತೆಗೆದುಕೊಂಡಿದೆ ಎಂದು ಪಾಲಿಕೆ ಆಯುಕ್ತರಾದ ಚಿದಾನಂದ ತಿಳಿಸಿದ್ದಾರೆ. ಸರ್ಕಾರ ಕೂಡ ಅವರನ್ನು ಕೊರೊನಾ ವಾರಿಯರ್ ಎಂದು ಪರಿಗಣಿಸಿ ಸೂಕ್ತ ಸೌಲಭ್ಯ ಒದಗಿಸಬೇಕಿದೆ.