ಶಿವಮೊಗ್ಗ: ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಇಡೀ ದೇಶವೇ ಸಂತೋಷ ಪಡುವಂತಹ ತೀರ್ಪು ಇಂದು ಪ್ರಕಟವಾಗಿದೆ ಎಂದು ಮಾಜಿ ಸಭಾಪತಿ ಡಿ.ಹೆಚ್. ಶಂಕರಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ 32 ಜನರನ್ನು ಕೋರ್ಟ್ ನಿರ್ದೋಷಿಗಳು ಎಂದು ತೀರ್ಪು ನೀಡಿದೆ. ಇದರಿಂದ ಲಾಲ್ ಕೃಷ್ಣ ಅಡ್ವಾಣಿಗಿಂತ ಹೆಚ್ಚಿನ ಸಂತೋಷ ನನಗೆ ಇದೆ ಎಂದರು.
ಬಾಬರಿ ಮಸೀದಿ ಧ್ವಂಸವಾದಾಗ ನಾನು ಕೂಡ ಅಲ್ಲೇ ಇದ್ದೆ. ಲಾಲ್ ಕೃಷ್ಣ ಅಡ್ವಾಣಿ ಅವರು ಸೇರಿದಂತೆ 32 ಜನ ವೇದಿಕೆ ಬಳಿ ಇದ್ದೆವು. ಅಲ್ಲಿ ಸೇರಿದ್ದ 1.50 ಲಕ್ಷ ಕರ ಸೇವಕರು ಸೇರಿದ್ದರು ಎಂದು ಶಂಕರಮೂರ್ತಿ ಸ್ಮರಿಸಿದರು.
ಮಸೀದಿ ಬೀಳಿಸಲು ಪ್ರಚೋದಿಸಿದರು ಎಂದು 32 ಜನರ ವಿರುದ್ಧ ಕೇಸ್ ದಾಖಲಾಗಿತ್ತು. ಆದರೆ ಇವರಱರು ಪ್ರಚೋದಕರಲ್ಲ, ಬದಲಾಗಿ ಜನರಿಗೆ ಮಸೀದಿ ಬಳಿ ಹೋಗಬೇಡಿ, ದೂರ ಹೋಗಿ ಎಂದು ಹೇಳುತ್ತಿದ್ದವರು. ಇವರೇ ಮಸೀದಿ ಬೀಳಿಸಿದರು ಎಂದು ಹೇಳಲು ಯಾವ ಸಾಕ್ಷ್ಯಗಳು ಇಲ್ಲ. ಇದರಿಂದ ಎಲ್ಲರನ್ನು ಖುಲಾಸೆ ಮಾಡಲಾಗಿದೆ ಎಂದು ಲಖನೌದ ಸಿಬಿಐ ಕೋರ್ಟ್ ಹೇಳಿದೆ ಎಂದರು.