ಶಿವಮೊಗ್ಗ : ಜಿಲ್ಲೆಯ ಮರಳು ಕ್ವಾರಿ ಘಟಕಗಳಲ್ಲಿ ಉಸುಕು ಎತ್ತಲು ಪರವಾನಗಿ ಹೊಂದಿರುವ ಕ್ವಾರಿಗಳ ನಿರ್ವಾಹಕರು ಇಲಾಖಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಹಾಗೂ ನಿಯಮಗಳನ್ನು ಧಿಕ್ಕರಿಸುವವರ ವಿರುದ್ಧ ಕಾನೂನು ಕ್ರಮ ಅನಿವಾರ್ಯವಾಗಲಿದೆ. ಅಲ್ಲದೇ ನೀಡಿರುವ ಪರವಾನಗಿ ರದ್ದುಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದರು.
ತಮ್ಮ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಮರಳು ಕ್ವಾರಿಗಳ ನಿರ್ವಹಣೆ ಹಾಗೂ ಗಣಿಗಾರಿಕೆ ಪುನಾರಂಭಿಸುವ ಕುರಿತು ಮರಳು ಸಮಿತಿ ಸಭೆ ನಡೆಯಿತು. ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಮರಳು ಕ್ವಾರಿಗಳ ಸಂಪರ್ಕ ರಸ್ತೆಯನ್ನು ಸಂಚಾರಕ್ಕೆ ಅನುಕೂಲವಾಗುವಂತೆ ಸರಿಪಡಿಸಿಕೊಳ್ಳುವುದರ ಜೊತೆಗೆ ಕ್ವಾರಿಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿಕೊಂಡು ಇಲಾಖೆಯ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಿದರು.
ಮರಳು ಸಾಗಾಟ ಮಾಡುವ ಸ್ಥಳಗಳಲ್ಲಿ ಆರಂಭಿಸಲಾಗಿರುವ ಚೆಕ್‍ಪೋಸ್ಟ್‍ಗಳಲ್ಲಿ ಇಲಾಖೆಯ ಸಿಬ್ಬಂದಿ ಓರ್ವ ಹೋಂಗಾರ್ಡ್‍ನ್ನು ನಿಯೋಜಿಸಬೇಕು. ಸಿಸಿ ಕ್ಯಾಮರಾ ಅಳವಡಿಸಬೇಕು. ಕ್ವಾರಿ ಮತ್ತು ಚೆಕ್‍ಪೋಸ್ಟ್‍ಗಳ ಸಿಸಿ ಕ್ಯಾಮರಾಗಳನ್ನು ವಾರಕ್ಕೊಮ್ಮೆ ಸಮೀಪದ ಪೊಲೀಸ್ ಠಾಣೆಗೆ ತಪಾಸಣೆಗಾಗಿ ತಲುಪಿಸುವಂತೆ ಹೇಳಿದರು.
ಮರಳು ಕ್ವಾರಿ ಇರುವ ತಾಲೂಕುಗಳಲ್ಲಿ ಆಯಾ ವ್ಯಾಪ್ತಿಯ ಉಪ ವಿಭಾಗಾಧಿಕಾರಿಗಳು ತಾಲೂಕು ಮಟ್ಟದ ಸಮಿತಿಗಳನ್ನು ರಚಿಸಿ, ಪ್ರತಿ ಮಾಹೆ ಸಭೆಯನ್ನು ಏರ್ಪಡಿಸಿ, ಮರಳು ವಿತರಣೆಗೆ ಸಂಬಂಧಿಸಿದಂತೆ ಸಮಾಲೋಚನೆ ನಡೆಸಬೇಕು. ಪ್ರಸ್ತುತ ಜಿಲ್ಲೆಯ ಕೆಲವು ಕ್ವಾರಿಗಳ ಪರವಾನಗಿ ಅವಧಿ ಪೂರ್ಣಗೊಂಡಿದ್ದು, ಅವುಗಳನ್ನು ಪುನಾರಂಭಿಸಲು ಟೆಂಡರ್ ಕರೆಯಬೇಕು. ತೀರ್ಥಹಳ್ಳಿಯ ಸಿಬ್ಬಲುಗುಡ್ಡೆ ಕ್ವಾರಿಯ ಆರಂಭಕ್ಕೆ ಸಂಬಂಧಿಸಿದಂತೆ ಉಪ ವಿಭಾಗಾಧಿಕಾರಿಗಳು ಹಾಗೂ ತಹಶೀಲ್ದಾರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ವರದಿ ನೀಡಿದ ನಂತರ ಕ್ವಾರಿ ಆರಂಭಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದರು.