ಶಿವಮೊಗ್ಗ: ಮಳೆ ನೀರು ಸರಾಗವಾಗಿ ಹರಿದು ಹೋಗಲು ಎಲ್ಲಾ ಚರಂಡಿಗಳ ಹೂಳು ತೆಗೆಯುವುದು ಸೇರಿದಂತೆ ಸ್ವಚ್ಛತಾ ಕಾರ್ಯವನ್ನು ಆದಷ್ಟು ಬೇಗನೆ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಸೂಚಿಸಿದರು.
ಇಂದು ತಾಲೂಕುಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಳೆಗಾಲದ ಪೂರ್ವಸಿದ್ಧತೆ ಪರೀಶೀಲನೆ ಸೇರಿದಂತೆ ಹಲವು ವಿಷಯಗಳ ಕುರಿತು ಸಭೆ ನಡೆಸಿ ಸೂಚನೆ ನೀಡಿದರು.
ಮಳೆಗಾಲದ ಸಂದರ್ಭದಲ್ಲಿ ಚರಂಡಿ ತುಂಬಿ ಯಾವುದೇ ಕಾರಣಕ್ಕೂ ನೀರು ಹೊರಗೆ ಹರಿಯುವ ಪರಿಸ್ಥಿತಿ ಎಲ್ಲಿಯೂ ಕಾಣಿಸಬಾರದು. ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗದೆ ಕೃತಕ ನೆರೆ ಸೃಷ್ಟಿಯಾದರೆ ಸಂಬಂಧಪಟ್ಟ ಸ್ಥಳೀಯ ಸಂಸ್ಥೆ ಮುಖ್ಯಾಧಿಕಾರಿಯನ್ನು ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದು ತಿಳಿಸಿದರು.
ಮಳೆಗಾಲದಲ್ಲಿ ಪ್ರವಾಹ ಸಾಧ್ಯತೆಯಿರುವ ಗ್ರಾಮಗಳನ್ನು ಗುರುತಿಸುವಂತೆ ಈಗಾಗಲೇ ತಹಶೀಲ್ದಾರ್ಗಳಿಗೆ ಸೂಚನೆ ನೀಡಲಾಗಿದೆ. ಅಂತಹ ಗ್ರಾಮಗಳ ಸಂಖ್ಯೆಗೆ ಅನುಗುಣವಾಗಿ ಪರಿಹಾರ ಕೇಂದ್ರಗಳಿಗೆ ಈಗಲೇ ಸ್ಥಳ ಗುರುತಿಸಿ ನೋಡಲ್ ಅಧಿಕಾರಿಯನ್ನು ಸಹ ನಿಯೋಜಿಸಬೇಕು. ತುಂಗಾ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಲು ಅವಕಾಶ ನೀಡಬಾರದು. ನೀರಿನ ಒಳ ಹರಿವಿನ ಮೇಲೆ ನಿರಂತರ ನಿಗಾ ಇರಿಸಿ, ಜಲಾಶಯದಿಂದ ನೀರು ಬಿಡುವ ಕುರಿತು ನಿರಂತರವಾಗಿ ಜಿಲ್ಲಾಡಳಿತದೊಂದಿಗೆ ಸಂಪರ್ಕದಲ್ಲಿರಬೇಕು. ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬ್ಲೀಚಿಂಗ್ ಪೌಡರ್ ಮತ್ತಿತರ ಸಾಮಗ್ರಿಗಳು ದಾಸ್ತಾನಿರಿಸಬೇಕು ಎಂದು ಹೇಳಿದರು.
ಮುಸುಕಿನ ಜೋಳ ಬೆಳೆ ಹಾನಿ ಪರಿಹಾರ: ಮುಸುಕಿನ ಜೋಳ ಬೆಳೆ ಹಾನಿಗೆ ಪರಿಹಾರ ನೀಡುವ ಕುರಿತು ಮಾರ್ಗಸೂಚಿ ಬಂದಿದ್ದು, ಈಗಾಗಲೇ ಪಂಚಾಯಿತಿವಾರು ಫಲಾನುಭವಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಅವುಗಳನ್ನು ಪರಿಶೀಲಿಸಲು ತಾಲೂಕುಮಟ್ಟದಲ್ಲಿ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ ಎಂದರು.
ಘನ ತ್ಯಾಜ್ಯ ವಿಲೇವಾರಿ: ಜಿಲ್ಲೆಯಲ್ಲಿ 190 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಜಮೀನು ಗುರುತಿಸಿ ಪ್ರಸ್ತಾವನೆ ಸ್ವೀಕರಿಸಲಾಗಿದೆ. ಇನ್ನುಳಿದ ಗ್ರಾಮ ಪಂಚಾಯಿತಿಗಳು ಸಹ ಆದಷ್ಟು ಬೇಗನೆ ಪ್ರಸ್ತಾವನೆ ಸಲ್ಲಿಸಬೇಕು. ಘಟಕ ನಿರ್ಮಾಣಕ್ಕೆ ಸರ್ಕಾರದಿಂದ ಪ್ರತಿ ಗ್ರಾಮ ಪಂಚಾಯಿತಿಗಳಿಗೆ 20 ಲಕ್ಷ ರೂ. ನೆರವು ದೊರೆಯಲಿದೆ ಎಂದರು.
ಸೂಚನೆ: ಕೆಲವು ತಾಲೂಕುಗಳಲ್ಲಿ ಸರ್ಕಾರಿ ಜಮೀನು ಅತಿಕ್ರಮಣದ ಕುರಿತು ನಿರಂತರ ದೂರುಗಳು ಬರುತ್ತಿವೆ. ಗ್ರಾಮ ಸಹಾಯಕರು ಅಥವಾ ಇನ್ನಿತರ ಕಂದಾಯ ಸಿಬ್ಬಂದಿ ಇದರಲ್ಲಿ ಶಾಮೀಲಾಗಿದ್ದರೆ ಗಂಭೀರವಾಗಿ ಪರಿಗಣಿಸಲಾಗುವುದು. ಇನ್ನು ಮುಂದೆ ಪ್ರತೀ ತಿಂಗಳು ಗ್ರಾಮಮಟ್ಟದಲ್ಲಿ ಅತಿಕ್ರಮಣವಾಗಿರುವ ಸರ್ಕಾರಿ ಜಮೀನಿನ ವಿವರ ಹಾಗೂ ತೆರವುಗೊಳಿಸಿರುವ ವಿವರಗಳನ್ನು ಗ್ರಾಮ ಸಹಾಯಕರು ನಿಗದಿತ ನಮೂನೆಯಲ್ಲಿ ಸಲ್ಲಿಸಬೇಕು ಎಂದು ಸೂಚಿಸಿದರು.