ಶಿವಮೊಗ್ಗ: ಜಿಲ್ಲೆಯಲ್ಲಿ ನಿರಂತರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಮೃತರ ಅಂತ್ಯಸಂಸ್ಕಾರ ಮಾಡಲು ಸಮಸ್ಯೆ ಎದುರಿಸುವಂತಾಗಿದೆ. ಮಳೆಯ ನಡುವೆ ಟಾರ್ಪಲ್ ಹಾಕಿಕೊಂಡು ಚಿತೆಗೆ ಬೆಂಕಿ ಇಟ್ಟ ಘಟನೆ ಜಿಲ್ಲೆಯ ಬೇಗುವಳ್ಳಿ ಗ್ರಾಮದಲ್ಲಿ ನಡೆದಿದೆ.
ತೀರ್ಥಹಳ್ಳಿ ತಾಲೂಕಿನ ಮೇಲಿನ ಕುರುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಣಸವಳ್ಳಿ ಗ್ರಾಮದ ಮುನ್ನೂರ ನಿವಾಸಿ ಭವಾನಿಯಮ್ಮ (70) ಎಂಬ ವೃದ್ಧೆ ಅನಾರೋಗ್ಯದಿಂದ ನಿಧನರಾಗಿದ್ದರು. ಆದರೆ, ವೃದ್ಧೆಯ ಅಂತ್ಯ ಸಂಸ್ಕಾರದ ವೇಳೆ ಭಾರಿ ಮಳೆ ಸುರಿದಿದ್ದು, ಸಂಬಂಧಿಕರು ಮತ್ತು ಗ್ರಾಮಸ್ಥರು ಟಾರ್ಪಲ್ ಅಡಿಯಲ್ಲಿ ಶವಸಂಸ್ಕಾರ ನೆರವೇರಿಸಿದ್ದಾರೆ.
ಸ್ಮಶಾನ ಜಾಗದ ಸಮಸ್ಯೆ: ಈ ಗ್ರಾಮದಲ್ಲಿ ಸ್ಮಶಾನ ಜಾಗದ ಸಮಸ್ಯೆಯೂ ಇದೆ. ಈ ಹಿಂದೆ ಗ್ರಾಮಸ್ಥರು ಸ್ಮಶಾನ ಜಾಗ ಗುರುತಿಸಿ, ಅದರ ಸರ್ವೇ ನಂಬರ್ ಅನ್ನು ಸಲ್ಲಿಸಿದ್ದರು. ಆದರೆ, ಅಧಿಕಾರಿಗಳು ಆ ಸರ್ವೇ ನಂಬರ್ ಬದಲಾಯಿಸಿ, ಬೇರೆಡೆ ಸ್ಮಶಾನ ಜಾಗ ಗುರುತಿಸಿದ್ದಾರೆ. ಇದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದು, ಸರ್ಕಾರ ಗಮನ ಹರಿಸಿ ಗ್ರಾಮದಲ್ಲೇ ಸ್ಮಶಾನ ಮಂಟಪದ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ರಾಜ್ಯದ ಬಹುತೇಕ ಕಡೆ ಮುಂದಿನ 48 ಗಂಟೆ ಮಳೆ, ಹಲವೆಡೆ ಯೆಲ್ಲೋ ಅಲರ್ಟ್