ಶಿವಮೊಗ್ಗ: ಕೋವಿಡ್ ಸೋಂಕಿನಿಂದ ಚೇತರಿಕೆ ಕಾಣುವವರಿಗೆ ಬೇಕಾದ ಆರೈಕೆ ಮಾಡಲು ಶಿವಮೊಗ್ಗದ ಶುಭ ಮಂಗಳದ ಸಮುದಾಯ ಭವನದಲ್ಲಿ ತಾತ್ಕಾಲಿಕವಾಗಿ 100 ಹಾಸಿಗೆಯ ಎಲ್ಲ ವೈದ್ಯಕೀಯ ಸೌಲಭ್ಯದ ಕೋವಿಡ್ ಕೇರ್ ಸೆಂಟರ್ ಪ್ರಾರಂಭ ಮಾಡಲಾಗುತ್ತಿದೆ.
ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಆದೇಶದಂತೆ ಸೇವಾ ಭಾರತಿ, ಕೋವಿಡ್ ಸುರಕ್ಷಾ ಪಡೆಯ ಸಹಯೋಗದಲ್ಲಿ ತಾತ್ಕಾಲಿಕ ಕೋವಿಡ್ ಕೇರ್ ಸೆಂಟರ್ ಪ್ರಾರಂಭ ಮಾಡಲಾಗುತ್ತಿದೆ. ಸರ್ಕಾರಿ ಆಸ್ಪತ್ರೆಗಳ ಮೇಲೆ ಒತ್ತಡ ಕಡಿಮೆ ಮಾಡಲು ಈ ರೀತಿಯ ಕೋವಿಡ್ ಕೇರ್ ಸೆಂಟರ್ಗಳ ಅವಶ್ಯಕತೆ ಇದೆ. ಆಸ್ಪತ್ರೆಯಲ್ಲಿ ಸೋಂಕಿನಿಂದ ಗುಣಮುಖರಾಗಿರುತ್ತಾರೆ. ಆದರೆ, ಅವರಿಗೆ ಇನ್ನೂ ಚಿಕಿತ್ಸೆಯ ಅವಶ್ಯಕತೆ ಇದೆ. ಇಂತಹವರಿಗಾಗಿಯೇ ಕೋವಿಡ್ ಕೇರ್ ಸೆಂಟರ್ ಪ್ರಾರಂಭ ಮಾಡಲಾಗುತ್ತಿದೆ.
ಸಮುದಾಯ ಭವನದ ಮೊದಲ ಮಹಡಿಯಲ್ಲಿ 50 ಹಾಸಿಗೆ ಹಾಗೂ ಕೆಳ ಭಾಗದಲ್ಲಿ 50 ಹಾಸಿಗೆಯ ವ್ಯವಸ್ಥೆಯನ್ನು ಮಾಡಲಾಗಿದೆ. ಮೊದಲ ಮಹಡಿಯಲ್ಲಿ ಕೋವಿಡ್ನಿಂದ ಚೇತರಿಕೆ ಕಂಡು ವಿಶ್ರಾಂತಿ ಪಡೆದುಕೊಳ್ಳುವವರಿಗೆ ಮೀಸಲಿಡಲಾಗಿದೆ. ಕೆಳಗಿನ ಭಾಗದಲ್ಲಿ ಆಕ್ಸಿಜನ್ ಅವಶ್ಯಕತೆ ಇರುವವರಿಗೆ ಮೀಸಲಿಡಲಾಗಿದೆ. ಈ ಕೋವಿಡ್ ಸೆಂಟರ್ ಅನ್ನು ಶಿವಮೊಗ್ಗದ ಮೆಟ್ರೋ ಯುನೈಟೆಡ್ ಹೆಲ್ತ್ ಸೆಂಟರ್ನ ಸಹಯೋಗದಲ್ಲಿ ಪ್ರಾರಂಭ ಮಾಡಲಾಗುತ್ತಿದೆ.
ಇದರಿಂದ ಇಲ್ಲಿ ಬರುವ ಸೋಂಕಿತರಿಗೆ ವೈದ್ಯಕೀಯ ಸೇವೆಯ ಜೊತೆಗೆ ಆಕ್ಸಿಜನ್ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಪ್ರತಿ 6 ಗಂಟೆಗೊಮ್ಮೆ ವೈದ್ಯಕೀಯ ಸಿಬ್ಬಂದಿ ಹಾಗೂ ನರ್ಸ್ಗಳು ಪಾಳಿ ಅನುಸಾರ ಕಾರ್ಯನಿರ್ವಹಿಸುತ್ತಾರೆ. ಈ ಕೇಂದ್ರಕ್ಕೆ ಬರುವವರು ಮೊದಲು ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಾಗಿ ನಂತರ ಅವರು ಗಾಜನೂರು ಅಥವಾ ಶುಭಮಂಗಳ ಸಮುದಾಯ ಭವನಕ್ಕೆ ಬರಬಹುದು. ಕೇರ್ ಸೆಂಟರ್ಗೆ ಸೋಂಕಿತರ ಸಂಬಂಧಿಗಳ ಪ್ರವೇಶಕ್ಕ ಅವಕಾಶವಿಲ್ಲ. ಸೋಂಕಿತರು ಹಾಗೂ ಸಂಬಂಧಿಕರಿಗೆ ಮಾತನಾಡಲು ಟೆಲಿಕಾಂ ವ್ಯವಸ್ಥೆ ಮಾಡಲಾಗುವುದು ಎಂದು ಸಚಿವ ಈಶ್ವರಪ್ಪ ತಿಳಿಸಿದ್ದಾರೆ. ಅದೇ ರೀತಿ ಸರ್ಕಾರದ ಮಾರ್ಗಸೂಚಿಯಂತೆ ವೈದ್ಯಕೀಯ ಸೌಲಭ್ಯವನ್ನು ಉತ್ತಮವಾಗಿ ಒದಗಿಸುತ್ತೇವೆ ಎನ್ನುತ್ತಾರೆ ಡಾ.ಪೃಥ್ವಿ ಅವರು.