ಶಿವಮೊಗ್ಗ: ಒಂದೇ ಕುಟುಂಬದ ಮೂವರು ಸಜೀವ ದಹನವಾಗಿದ್ದು, ಓರ್ವ ತೀವ್ರವಾಗಿ ಗಾಯಗೊಂಡಿರುವ ಘಟನೆ ತೀರ್ಥಹಳ್ಳಿಯ ಅರಳಸುರಳಿ ಗ್ರಾಮದ ಬಳಿ ನಡೆದಿದೆ. ಹೊಸನಗರ ರಸ್ತೆಯ ಗಣಪತಿ ಕಟ್ಟೆ ರೈಸ್‌ಮಿಲ್ ಹತ್ತಿರದ ಮನೆಯೊಂದರಲ್ಲಿ ದುರಂತ ಜರುಗಿದೆ. ರಾಘವೇಂದ್ರ (63), ಪತ್ನಿ ನಾಗರತ್ನ (55) ಹಾಗೂ ಪುತ್ರ ಶ್ರೀರಾಮ್ (34) ಮೃತರು. ಇನ್ನೊಬ್ಬ ಪುತ್ರ ಭರತ್ (30) ಗಂಭೀರವಾಗಿ ಗಾಯಗೊಂಡಿದ್ದು, ತೀರ್ಥಹಳ್ಳಿಯ ಜೆ.ಸಿ.ಆಸ್ಪತ್ರೆಗೆ ರವಾನಿಸಲಾಗಿದೆ. ಮನೆ ಭಾಗಶಃ ಸುಟ್ಟು ಹೋಗಿದೆ. ತೀರ್ಥಹಳ್ಳಿ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಆತ್ಮಹತ್ಯೆ ಶಂಕೆ: ರಾಘವೇಂದ್ರ ಗ್ರಾಮದಲ್ಲಿ ಅರ್ಚಕ ವೃತ್ತಿ ಮಾಡುತ್ತಿದ್ದರು. ಮನೆಯ ಹಾಲ್ನಲ್ಲಿಯೇ ಕಟ್ಟಿಗೆ ಜೋಡಿಸಿಟ್ಟು ಬೆಂಕಿ ಹಚ್ಚಿಕೊಂಡಿರುವ ಕುರುಹುಗಳು ಪತ್ತೆಯಾಗಿವೆ. ಗ್ರಾಮಸ್ಥರು ಹೊಗೆ ಗಮನಿಸಿ ಮನೆಯಲ್ಲಿದ್ದವರನ್ನು ರಕ್ಷಿಸಲು ಯತ್ನಿಸಿದ್ದಾರೆ. ಓರ್ವನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕುಟುಂಬ ಆತ್ಮಹತ್ಯೆಗೆ ಯತ್ನಿಸಿರುವ ಶಂಕೆ ವ್ಯಕ್ತವಾಗಿದೆ.
ಆರಗ ಜ್ಞಾನೇಂದ್ರ ಪ್ರತಿಕ್ರಿಯೆ: "ಘಟನೆ ತೀವ್ರ ನೋವುಂಟು ಮಾಡಿದೆ" ಎಂದು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ಅರಳಸುರಳಿ ಗ್ರಾಮಕ್ಕೆ ಭೇಟಿ ನೀಡಿ ಮಾತನಾಡಿದ ಅವರು, "ಕೆಕೋಡು ರಾಘವೇಂದ್ರ ಅವರ ಕುಟುಂಬ ನನಗೆ ತುಂಬ ಹತ್ತಿರವಾದ ಕುಟುಂಬ. ಮೂವರು ಸಾವನ್ನಪ್ಪಿದ್ದಾರೆ. ಇನ್ನೊಬ್ಬ ಪುತ್ರ ಭರತ್ ಗಾಯಗೊಂಡಿದ್ದಾನೆ. ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ" ಎಂದರು.
"ಇವರ ಕುಟುಂಬದ ಬ.ರಾ.ಕೃಷ್ಣಮೂರ್ತಿ ಎಂಬವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕರಾಗಿ ದೆಹಲಿಯಲ್ಲಿದ್ದರು. ಈಗ ಬೆಂಗಳೂರಿಗೆ ಬಂದಿದ್ದಾರೆ. ನನಗೆ ಕಳೆದ 40 ವರ್ಷಗಳಿಂದ ಪರಿಚಯ. ಆರ್ಥಿಕವಾಗಿ ಅನುಕೂಲಸ್ಥರು. ಇವರಿಗೆ 10 ಎಕರೆ ಅಡಿಕೆ ತೋಟವಿದೆ. ಸಹೋದರರ ಪೈಕಿ ಒಬ್ಬ ವೈದ್ಯ, ಒಬ್ಬರು ಟೆಲಿಪೋನ್ ಇಲಾಖೆಯಲ್ಲಿದ್ದಾರೆ. ರಾಘವೇಂದ್ರರ ಮಗ ಭರತ್ ಅಡಿಕೆ ವ್ಯಾಪಾರ ಮಾಡಿಕೊಂಡು ಇದ್ದಾರೆ. ಸ್ಥಳಕ್ಕೆ ಎಸ್ಪಿ ಭೇಟಿ ನೀಡಲಿದ್ದು, ಎಫ್‌ಎಸ್‌ಎಲ್ ತಂಡ ಆಗಮಿಸಲಿದೆ. ತನಿಖೆಯ ನಂತರ ಆತ್ಮಹತ್ಯೆಗೆ ಕಾರಣ ತಿಳಿದುಬರಲಿದೆ" ಎಂದು ಹೇಳಿದರು.
ಎಸ್ಪಿ ಹೇಳಿಕೆ: ಘಟನೆ ಬಗ್ಗೆ ಮಾಹಿತಿ ನೀಡಿರುವ ಎಸ್ಪಿ ಮಿಥುನ್ ಕುಮಾರ್, ''ರಾಘವೇಂದ್ರ ಅವರ ಕುಟುಂಬಸ್ಥರೆಲ್ಲ ಒಟ್ಟಿಗೆ ಯಾವ ಕಾರಣಕ್ಕೆ ಸಾಯಲು ನಿರ್ಧರಿಸಿದ್ದರು ಎಂಬುದು ತನಿಖೆಯಿಂದ ತಿಳಿದು ಬರಬೇಕಿದೆ. ಎಲ್ಲರೂ ಮನೆಯೊಳಗೆ ಕಟ್ಟಿಗೆ ಹಾಕಿ, ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮೃತ ಮೂವರು ಒಬ್ಬರ ಕೈ ಇನ್ನೊಬ್ಬರು ಹಿಡಿದುಕೊಂಡು ಸಾವನ್ನಪ್ಪಿದ್ದಾರೆ. ರಾಘವೇಂದ್ರ ಅವರ ಕೊನೆಯ ಮಗ ಭರತ್ ಶೇಕಡಾ 50ರಷ್ಟು ಸುಟ್ಟ ಗಾಯಗಳೊಂದಿಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆತ್ಮಹತ್ಯೆ ಕುರಿತಂತೆ ಪ್ರಾಥಮಿಕವಾಗಿ ಕೆಲ ಸಾಕ್ಷಿಗಳು ಲಭಿಸಿವೆ. ಆತ್ಮಹತ್ಯೆಗೆ ನಿಖರ ಕಾರಣವು ತನಿಖೆಯಿಂದಲೇ ತಿಳಿಯಬೇಕಿದೆ. ಈಗಾಗಲೇ ನಮ್ಮ ಇಲಾಖೆ ತನಿಖೆ ಪ್ರಾರಂಭಿಸಿದೆ'' ಎಂದು ತಿಳಿಸಿದ್ದಾರೆ.
ಇದನ್ನೂಓದಿ: ಅಮೆರಿಕದಲ್ಲಿ ಭಾರತ ಮೂಲದ ದಂಪತಿ, ಮಕ್ಕಳ ಅನುಮಾನಾಸ್ಪದ ಸಾವು