ಶಿವಮೊಗ್ಗ: ಮಣಿಪಾಲದ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಶಿವಮೊಗ್ಗ ಜಿಲ್ಲೆಯ ವೃದ್ಧೆಯಲ್ಲಿ ಕೋವಿಡ್-19 ವೈರಸ್ ಪತ್ತೆಯಾಗಿಲ್ಲ ಎಂದು ಜಿಲ್ಲಾ ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.
ಸಾಗರ ತಾಲೂಕು ಆನಂದಪುರಂ ಬಳಿಯ ಆಚಾಪುರ ಗ್ರಾಮದ ವೃದ್ಧೆಯೋರ್ವರು ತೀವ್ರ ಜ್ವರ ಹಾಗೂ ನಿಶಕ್ತಿಯಿಂದ ಮಣಿಪಾಲದ ಆಸ್ಪತ್ರೆಗೆ ದಾಖಲಾಗಿದ್ದರು. ಇವರಿಗೆ ಕೋವಿಡ್-19 ವೈರಸ್ ತಗುಲಿದೆ ಎಂಬ ವದಂತಿ ಜಿಲ್ಲೆಯಲ್ಲಿ ಹಬ್ಬಿತ್ತು. ಈ ಹಿನ್ನೆಲೆ ಶಿವಮೊಗ್ಗದ ವಿಆರ್ಡಿಎಲ್ ಹಾಗೂ ಸಿಮ್ಸ್ ಕಾಲೇಜಿನಲ್ಲಿ ವೃದ್ಧೆಯ ರಕ್ತ ಪರೀಕ್ಷೆ ನಡೆಸಿದಾಗ ನೆಗೆಟಿವ್ ಬಂದಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ರಾಜೇಶ್ ಸುರಗಿಹಳ್ಳಿ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವೃದ್ಧೆ ಕೆಲ ದಿನಗಳ ಹಿಂದೆ ಮೆಕ್ಕಾಗೆ ಹೋಗಿ ಬಂದಿದ್ದರು ಎನ್ನಲಾಗಿದೆ. ಈ ಹಿನ್ನೆಲೆ ಅವರಿಗೆ ಜ್ವರ ಬಂದಿದ್ದನ್ನು ಕೋವಿಡ್-19 ಎಂದು ಶಂಕಿಸಲಾಗಿತ್ತು. ಜಿಲ್ಲಾ ಆರೋಗ್ಯಾಧಿಕಾರಿಗಳ ಪ್ರಕಟಣೆಯಿಂದ ಜಿಲ್ಲೆಯ ಜನತೆ ನಿರಾಳರಾಗಿದ್ದಾರೆ.