ಶಿವಮೊಗ್ಗ : ತನ್ನ ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ಕೊರೊನಾ ಬಗ್ಗೆ ಜಾಗೃತಿ ವಾಕ್ಯಗಳನ್ನು ಮುದ್ರಿಸುವ ಮೂಲಕ ಯುವಕನೊಬ್ಬ ಗಮನ ಸೆಳೆದಿದ್ದಾರೆ.
ತಾಲೂಕು ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಸೊರಬ ಪಟ್ಟಣದ ವಿನೋದ್, ಚಂದನಾ ಎಂಬಾಕೆಯನ್ನು ಪ್ರೀತಿಸಿ ಮನೆಯವರ ಒಪ್ಪಿಗೆಯೊಂದಿಗೆ ಜೂನ್ 15ರಂದು ವಿವಾಹವಾಗಲಿದ್ದಾರೆ. ಆದರೆ, ಕೊರೊನಾ ಹಿನ್ನೆಲೆ ಮದುವೆ ಕಾರ್ಯಕ್ರಮಕ್ಕೆ ಸರ್ಕಾರ ಮಾರ್ಗ ಸೂಚಿ ರೂಪಿಸಿದೆ. ಆ ಪ್ರಕಾರ ಹೆಚ್ಚಿನ ಜನ ಸೇರುವಂತಿಲ್ಲ. ಹೀಗಾಗಿ ವಿನೋದ್ ತನ್ನ ಸಂಬಂಧಿಕರು ಮತ್ತು ಸ್ನೇಹಿತರಿಗಾಗಿ ವಿಶೇಷ ಆಮಂತ್ರಣ ಪತ್ರ ಮುದ್ರಿಸಿದ್ದಾರೆ.
ಕವನ ಬರೆಯುವ ಹವ್ಯಾಸ ಹೊಂದಿರುವ ವಿನೋದ್ ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಬರೆಯುವ ಜಾಗದಲ್ಲಿ 'ವಿನೋದ್ ಹಾಗೂ ಚಂದನಾ ಇಬ್ಬರಿಗೂ ಪರಸ್ಪರ ಪ್ರೀತಿಯೆಂಬ ಸೋಂಕು ಇರುವುದಾಗಿ ದೃಢಪಟ್ಟಿದ್ದು, ನಿಶ್ಚಿತಾರ್ಥ ಮೂಲಕ ಲಾಕ್‌ಡೌನ್ ಮಾಡಿ, ಮದುವೆ ಎಂಬ ಸೀಲ್‌ಡೌನ್ ಮಾಡಿ ಜೀವನವಿಡಿ ಕ್ವಾರಂಟೈನ್ ಮಾಡಲು ಗುರು-ಹಿರಿಯರು ಬಂಧು ಮಿತ್ರರು ತೀರ್ಮಾನಿಸಿದ್ದಾರೆ.
ತಮ್ಮ ಹೆಸರು ನಮ್ಮ ಮನದಲ್ಲಿದೆ, ತಾವುಗಳು ಮುಖಕ್ಕೆ ಮಾಸ್ಕ್ ಧರಿಸಿ, ಕೈಗಳಿಗೆ ಸ್ಯಾನಿಟೈಸರ್ ಹಚ್ಚಿಕೊಂಡು, ಸಾಮಾಜಿಕ ಅಂತರದೊಂದಿಗೆ ಬಂದು ಆಶೀರ್ವದಿಸಬೇಕೆಂದು ಆಹ್ವಾನಿಸುತ್ತೇನೆ ಎಂದು ಮುದ್ರಿಸಿದ್ದಾರೆ. ವಿನೋದ್ ವಿವಾಹದ ಈ ವಿಶಿಷ್ಟ ಆಮಂತ್ರಣ ಪತ್ರಿಕೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.