ಶಿವಮೊಗ್ಗ: ಕಳೆದ ಮೂರ್ನಾಲ್ಕು ದಿನಗಳಿಂದ ಜಿಲ್ಲೆಯ ಹೊಸನಗರ, ಸಾಗರ ಭಾಗದಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಸಾಗರ ತಾಲೂಕಿನ ಎಲ್ಲಾ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಹೊಸನಗರದಲ್ಲಿ ಮಳೆಯ ಸಂದರ್ಭಕ್ಕೆ ತಕ್ಕಂತೆ ಶಾಲೆಗಳಿಗೆ ರಜೆ ನೀಡಲು ಬಿಇಒ ಶಾಲೆಗಳಿಗೆ ಸೂಚಿಸಿದ್ದಾರೆ.
ಇನ್ನು ಜಿಲ್ಲೆಯ ಶಿವಮೊಗ್ಗ, ತೀರ್ಥಹಳ್ಳಿ, ಭದ್ರಾವತಿ, ಶಿಕಾರಿಪುರ, ಸೊರಬದಲ್ಲೂ ಮಳೆಯಾಗಿದೆ. ಮಳೆಯಿಂದ ಹಲವು ಮನೆಗಳು ಭಾಗಶಃ ಕುಸಿದು ಬಿದ್ದಿವೆ. ಅನೇಕ ಕೆರೆಗಳು ಕೋಡಿ ಬೀಳುವ ಸ್ಥಿತಿಯಲ್ಲಿವೆ. ಜಿಲ್ಲೆಯಲ್ಲಿ ಮಳೆ ಹೆಚ್ಚಾಗುತ್ತಿರುವುದರಿಂದ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳನ್ನು ಅಧಿಕಾರಿಗಳು ಬಿಟ್ಟು ಹೋಗದಂತೆ ಜಿಲ್ಲಾಧಿಕಾರಿಗಳು ಅದೇಶ ಹೊರಡಿಸಿದ್ದಾರೆ. ಇದರಿಂದ ಅಧಿಕಾರಿಗಳಿಗೆ ದೀಪವಾಳಿಗೆ ರಜೆ ಇಲ್ಲದಂತಾಗಿದೆ.
ಮಳೆಯಿಂದ ಜಿಲ್ಲೆಯ ಎಲ್ಲಾ ಅಣೆಕಟ್ಟುಗಳು ಭರ್ತಿ: ಜಿಲ್ಲೆಯ ಪ್ರಮುಖ 3 ಅಣೆಕಟ್ಟುಗಳು ಭರ್ತಿಯಾಗಿವೆ. ಸಾಗರದ ಲಿಂಗನಮಕ್ಕಿ ಜಲಾಶಯ 1819 ಅಡಿಗಳಿದ್ದು, ಸದ್ಯ 1818.60 ಅಡಿ ನೀರು ಸಂಗ್ರಹವಾಗಿದೆ. ಒಳ ಹರಿವು-34.635 ಕ್ಯೂಸೆಕ್ ಇದೆ. ಹೊರ ಹರಿವು-35.820 ಕ್ಯೂಸೆಕ್ ಇದೆ. ಭದ್ರಾವತಿಯ ಭದ್ರಾ ಅಣೆಕಟ್ಟು 186 ಅಡಿ ಎತ್ತರವಿದ್ದು, ಸದ್ಯ 185.9 ಅಡಿ ನೀರು ಸಂಗ್ರಹವಾಗಿದೆ. ಒಳ ಹರಿವು- 14.277 ಕ್ಯೂಸೆಕ್ ಇದ್ದರೆ, ಹೊರ ಹರಿವು-13. 676 ಕ್ಯೂಸೆಕ್ ಇದೆ. ಅದೇ ರೀತಿ ಶಿವಮೊಗ್ಗ(ಗಾಜನೂರು) ತುಂಗಾ ಅಣೆಕಟ್ಟು 596 ಮೀಟರ್ ಎತ್ತರವಿದ್ದು, ಒಳ ಹರಿವು-11.760 ಕ್ಯೂಸೆಕ್ ಇದೆ, ಹೊರ ಹರಿವು-11.712 ಕ್ಯೂಸೆಕ್ ಇದೆ.