ಶಿವಮೊಗ್ಗ: ಅಲ್ಪಸಂಖ್ಯಾತರ ಮನಸ್ಸಿನಲ್ಲಿ ಕಾಂಗ್ರೆಸ್ ಹಾಗೂ ಕಮ್ಯುನಿಸ್ಟರು ಭೂತ ಸೃಷ್ಟಿಸುವ ಕುತಂತ್ರ ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಕಿಡಿಕಾರಿದ್ದಾರೆ.
ಮಂಗಳೂರು ಘಟನೆಗೆ ಕಾಂಗ್ರೆಸ್ ಹಾಗೂ ಕಮ್ಯುನಿಸ್ಟರು ನೇರ ಕಾರಣರಾಗಿದ್ದಾರೆ. ಇವರಿಬ್ಬರೂ ಜನರಿಗೆ ತಪ್ಪು ಮಾಹಿತಿ ನೀಡಿ ಗೊಂದಲನ್ನುಂಟು ಮಾಡುತ್ತಿದ್ದಾರೆ. ಮೊದಲು ಕಾಂಗ್ರೆಸ್ ಹಾಗೂ ಕಮ್ಯುನಿಸ್ಟರು ಕುಳಿತು ಕಾನೂನು ಅಧ್ಯಯನ ಮಾಡಲಿ. ಅದರಲ್ಲಿ ದೋಷವಿದ್ದರೆ ಅದನ್ನು ಎತ್ತಿ ಹಿಡಿಯಲಿ ಎಂದರು.
ಖಾದರ್ ಒಬ್ಬ ಮಾಜಿ ಮಂತ್ರಿ. ಅವರಿಗೆ ಸರಿಯಾದ ಮಾಹಿತಿ ಇಲ್ಲದೆ ಇರುವುದು ದುರಂತ. ಖಾದರ್ ಅವರೇ ಪೌರತ್ವ ಕಾಯ್ದೆ ಬಗ್ಗೆ ಸರಿಯಾದ ಮಾಹಿತಿ ತಿಳಿದುಕೊಂಡಿಲ್ಲ ಅಂದ್ರೆ ಕಾಂಗ್ರೆಸ್ನಲ್ಲಿ ಇನ್ಯಾರೂ ತಿಳಿದುಕೊಳ್ಳಲು ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು. ಮುಸ್ಲಿಮರಿಗೆ ಪೌರತ್ವ ಕಾಯ್ದೆಯಿಂದ ಯಾವುದೇ ಬಾಧಕವಿಲ್ಲ. ಇದು ಪೌರತ್ವ ಕೊಡುವ ಕಾಯ್ದೆಯೇ ಹೊರತು, ಪೌರತ್ವ ಕಿತ್ತುಕೊಳ್ಳುವ ಕಾಯ್ದೆಯಲ್ಲ ಎಂದು ಸ್ಪಷ್ಟಪಡಿಸಿದರು.
ಮಂಗಳೂರು ಪ್ರಕರಣ ಪೂರ್ವನಿಯೋಜಿತ ಎಂಬುದಕ್ಕೆ ಸಿಸಿಟಿವಿ ಫುಟೇಜ್ ಸಾಕ್ಷಿಯಾಗಿವೆ. ಪ್ರಕರಣದ ತನಿಖೆ ಆರಂಭಕ್ಕೂ ಮುನ್ನವೇ ಕಾಂಗ್ರೆಸ್ನವರು ಫಲಿತಾಂಶ ಹೇಳುತ್ತಿದ್ದಾರೆ. ಕಾಂಗ್ರೆಸ್ನವರು ಬೇಜವಾಬ್ದಾರಿ ಹೇಳಿಕೆ ನೀಡುತ್ತಿರುವುದು ಸರಿಯಲ್ಲ. ಕೇರಳದವರು ಮಂಗಳೂರಿಗೆ ಬಂದು ಪ್ರತಿಭಟನೆ ಮಾಡಿ ಗಲಭೆ ಸೃಷ್ಟಿ ಮಾಡಿದ್ದಾರೆ. ಕೇರಳದ ಒಂದು ಸಮಾಜ ವಿರೋಧಿ ಯುವಕರ ತಂಡ ಆ್ಯಕ್ಟಿವ್ ಆಗಿದೆ. ಅಂತಹವರ ಗುರುತಿಸಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮತ್ತೆ ಮತ್ತೆ ಇಂತಹ ಘಟನೆಗಳು ಮರುಕಳಿಸುತ್ತವೆ ಎಂದು ಆತಂಕ ವ್ಯಕ್ತಪಡಿಸಿದರು.