ಶಿವಮೊಗ್ಗ: ನಾವು ನಿಮ್ಮನ್ನು ಉಳಿಸುತ್ತೇವೆ, ನೀವು ನಮ್ಮನ್ನು ಉಳಿಸಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿಐಎಸ್ಎಲ್ ಗುತ್ತಿಗೆ ಕಾರ್ಮಿಕರಿಗೆ ಮನವಿ ಮಾಡಿದರು. ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಭದ್ರಾವತಿಗೆ ಆಗಮಿಸಿದ್ದು ವಿಐಎಸ್ಎಲ್ ಕಾರ್ಖಾನೆ ಉಳಿಸಿ ಎಂದು ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಹೋರಾಟದ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಅವರು ಮಾತನಾಡಿದರು.
ದೇಶದ ಆಧಾರ ಸ್ತಂಭಗಳೆಂದರೆ ಕೃಷಿಕ, ಕಾರ್ಮಿಕ, ಶಿಕ್ಷಕ ಹಾಗೂ ಸೈನಿಕ. ಇವರೆಲ್ಲರೂ ಸುಕ್ಷೇಮವಾಗಿದ್ರೆ ದೇಶ ಭದ್ರವಾಗಿರುತ್ತದೆ. ಕೃಷ್ಣರಾಜ ಒಡೆಯರ್ ಈ ಕಾರ್ಖಾನೆ ಸ್ಥಾಪನೆಗೆ ರಾಣಿ ಒಡವೆಯನ್ನು ಒತ್ತೆ ಇಟ್ಟಿದ್ದರು. ಈ ಹಿಂದೆ ತ್ಯಾಗ ಮನೋಭಾವ ಬಹಳ ದೊಡ್ಡದಿತ್ತು ಎಂದರು.
ಉಕ್ಕಿನ ಕಾರ್ಖಾನೆ ನಮ್ಮ ದೇಶ, ರಾಜ್ಯದ ದೊಡ್ಡ ಸಂಪತ್ತು. 1661 ಎಕರೆ ಭೂಮಿಯಲ್ಲಿರುವ ಈ ಕಾರ್ಖಾನೆಯನ್ನು ನಂಬಿ ಸಾವಿರಾರು ಕುಟುಂಬಗಳಿವೆ. ಭದ್ರಾವತಿ ಅಂದ್ರೆ ಉಕ್ಕಿನ ನಗರ ಅಂತ ಹೆಸರು ಬಂದಿದೆ. ಈಗ ಏನಾಗಿದೆ? ಉಕ್ಕು ಖಾಲಿಯಾಗಿ 300 ಜನ ಮಾತ್ರ ಖಾಯಂ ಉದ್ಯೋಗಿಗಳಿದ್ದಾರೆ. 1 ಸಾವಿರ ಜನ ಗುತ್ತಿಗೆ ನೌಕರರಿದ್ದಾರೆ. ಶಾಸಕ ಸಂಗಮೇಶ್ ಹಿಂದೆ ಸೋತರೂ ಸಹ ಕಾರ್ಖಾನೆಗೆ ಮೈನ್ ಕೊಡಿಸಿದರು. ಅದು ಈಗ ಸಾವಿರಾರು ಕೋಟಿ ರೂ ಆಗುತ್ತದೆ. ಇದು ನಿಮ್ಮ ಶಕ್ತಿ ಎಂದರು.
ಎನ್ಒಸಿ ನೀಡಿ ಲೀಸ್ ಕೊಡಿಸಬೇಕಷ್ಟೇ: ಗಣಿಯನ್ನು ನಿಮ್ಮ ಕಾರ್ಖಾನೆಗೆ ಎನ್ಓಸಿ ನೀಡಿ ಲೀಸ್ ಕೊಡಿಸಬೇಕಷ್ಟೇ. ಲೀಸ್ ಕೊಟ್ಟರೆ ಕಬ್ಬಿಣ ಬರುತ್ತದೆ. ಉದ್ಯೋಗ ಸಿಗುತ್ತದೆ ಎಂದರು.
ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣ: ಈಶ್ವರಪ್ಪರಿಂದ ಗುತ್ತಿಗೆದಾರ ಸಂತೋಷ ಆತ್ಮಹತ್ಯೆ ಮಾಡಿಕೊಂಡ್ರು. ಬಿಜೆಪಿಯವರು ಏನೂ ನೀಡಲಿಲ್ಲ. ನಾನು ಹೋಗಿ 15 ಲಕ್ಷ ರೂಪಾಯಿಗಳನ್ನು ಕೆಪಿಸಿಸಿಯಿಂದ ಮಾನವೀಯತೆಯಿಂದ ನೀಡಿ ಬಂದೆ ಎಂದು ಡಿಕೆಶಿ ಹೇಳಿದರು.
ಇದನ್ನೂಓದಿ: ವಿಐಎಸ್‌ಎಲ್ ಕಾರ್ಖಾನೆ ಮತ್ತೆ ಆರಂಭವಾಗಿ ಲಾಭದಲ್ಲಿ ನಡೆಯಬೇಕು: ಸಿಎಂ ಬೊಮ್ಮಾಯಿ