ಶಿವಮೊಗ್ಗ: ಈ ಬಾರಿಯ ಬಜೆಟ್, ವೋಟ್ ಬ್ಯಾಂಕ್ ಬಜೆಟ್. ಇದು ರಾಜ್ಯದ ಜನತೆಯ ಕಿವಿ ಮೇಲೆ ಹೂವಿಟ್ಟ ಬಜೆಟ್ ಆಗಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಎಸ್. ಸುಂದರೇಶ್ ತಮ್ಮ ಕಿವಿ ಮೇಲೆ ಹೂವಿಟ್ಟುಕೊಂಡು ಇಂದು ನಗರದ ಕಾಂಗ್ರೆಸ್ ಭವನದಲ್ಲಿ ಮಾಧ್ಯಮಗೋಷ್ಟಿ ನಡೆಸಿದರು.
ಕಳೆದ ನಾಲ್ಕು ವರ್ಷಗಳ ಹಿಂದೆ ಮಂಡಿಸಿದ ಬಜೆಟ್ನಲ್ಲಿ ಮಾಡಿದ ಘೋಷಣೆಗಳಲ್ಲಿ ಐವತ್ತು ಭರವಸೆ ಕೂಡ ಈಡೇರಿಲ್ಲ. ಈಗ ಈ ಬಜೆಟ್ನಲ್ಲೂ ಸಹ ಅದನ್ನೇ ಪುನರಾವರ್ತನೆ ಮಾಡಿದ್ದಾರೆ ಅಷ್ಟೇ. ಬೊಮ್ಮಾಯಿ ಅವರು ಚುನಾವಣಾ ಬಜೆಟ್ ಘೋಷಣೆ ಮಾಡಿದ್ದಾರೆ. 3,70,000 ಕೋಟಿ ರೂಪಾಯಿ ಬಜೆಟ್ ಘೋಷಣೆ ಮಾಡಿ, ಮಲೆನಾಡು ಭಾಗಕ್ಕೆ ಯಾವುದೇ ಹೊಸ ಕಾರ್ಯಕ್ರಮಗಳನ್ನು ಘೋಷಿಸಿಲ್ಲ, ವಿಐಎಸ್ಎಲ್ ಹಾಗೂ ಎಂಪಿಎಂ ಪುನಶ್ಚೇತನ ಬಗ್ಗೆ ಯಾವುದೇ ಮಾತನ್ನು ಆಡಿಲ್ಲ ಎಂದು ಬಿಜೆಟ್ಅನ್ನು ವಿರೋಧಿಸಿದರು.
ಈ ಬಜೆಟ್ ತೂಕವಿಲ್ಲದ ಬಜೆಟ್. ಬಿಜೆಪಿ ಪಕ್ಷದವರು ಜನರ ಕಿವಿ ಮೇಲೆ ಹೂವು ಇಟ್ಟಿದೆ, ಆದರೆ ನಮ್ಮ ಪಕ್ಷ ಘೋಷಣೆ ಮಾಡಿದ್ದನ್ನು ಮಾಡಿ ತೋರಿಸುತ್ತದೆ ಎಂದು ಹೇಳಿದರು. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ 200 ಯುನಿಟ್ ಉಚಿತ ವಿದ್ಯುತ್ ಹಾಗೂ ಮಹಿಳೆಯರಿಗೆ 2 ಸಾವಿರ ರೂ ಹಣ ನೀಡುವುದಾಗಿ ನಮ್ಮ ನಾಯಕರು ಘೋಷಣೆ ಮಾಡಿದ್ದಾರೆ. ಜನರ ಕಿವಿಗೆ ಹೂವು ಇಟ್ಟ ಕಾರಣ, ನಾವು ಕಿವಿ ಮೇಲೆ ಹೂವಿಟ್ಟುಕೊಂಡು ಮಾಧ್ಯಮಗೋಷ್ಟಿ ನಡೆಸುತ್ತಿದ್ದೇವೆ ಎಂದು ತಿಳಿಸಿದರು.
ಸಚಿವ ಅಶ್ವತ್ಥ್ ನಾರಾಯಣ್ ರಾಜೀನಾಮೆ ನೀಡಬೇಕು: ಸಚಿವ ಅಶ್ವತ್ಥ್ ನಾರಾಯಣ ಅವರು ಸಿದ್ದರಾಮಯ್ಯನವರನ್ನು ಟಿಪ್ಪುವಿನಂತೆ ಹೊಡೆದು ಹಾಕಿ ಎಂದು ಹೇಳಿಕೆ ನೀಡಿರುವುದು ಖಂಡನೀಯವಾಗಿದೆ. ಇದು ಅವರ ಸಂಸ್ಕೃತಿಯನ್ನು ತೋರಿಸುತ್ತಿದೆ. ಜನರ ಹಣ ಲೂಟಿ ಮಾಡಿ ಬಿಜೆಪಿಯವರು ಚುನಾವಣೆ ಮಾಡುತ್ತಾರೆ. ತಕ್ಷಣ ಅಶ್ವತ್ಥ್ ನಾರಾಯಣ ರಾಜೀನಾಮೆ ನೀಡಬೇಕೆಂದು ಸುಂದರೇಶ್ ಒತ್ತಾಯಿಸಿದರು.
ಸುಧಾಕರ್ ಮಾಡಿದ ಅನ್ಯಾಯಕ್ಕೆ ರಥದ ಚಕ್ರ ಮುರಿದು ಬಿದ್ದಿದೆ: ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಮಾಡಿದ ಅನ್ಯಾಯಕ್ಕೆ ಚಿಕ್ಕಬಳ್ಳಾಪುರದಲ್ಲಿ ಬೋಗ ನಂದಿಶ್ವರ ರಥದ ಚಕ್ರ ಮುರಿದು, ರಥವೇ ಕುಸಿದು ಬಿದ್ದಿದೆ ಎಂದು ಅವರು ಆರೋಪಿಸಿದರು. ಬಿಜೆಪಿಯವರು ಉದ್ಯೋಗದ ಹೆಸರಿನಲ್ಲಿ ಭ್ರಷ್ಟಾಚಾರ ಮಾಡುತ್ತಿದ್ದಾರೆ. ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳ ಜಗಳಕ್ಕೆ ಬ್ರೇಕ್ ಹಾಕಿ ಇಬ್ಬರನ್ನು ಕರೆದು ಬುದ್ಧಿ ಹೇಳಲು ಆಗದ ಅಸಮರ್ಥ ಸರ್ಕಾರ ಇದಾಗಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕಿಡಿಕಾರಿದರು.
ವಿಮಾನ ನಿಲ್ದಾಣ ಉದ್ಘಾಟನೆಗೂ ಮುನ್ನ ಪರಿಹಾರ ನೀಡಿ: ಶಿವಮೊಗ್ಗದಲ್ಲಿ ನೂತನವಾಗಿ ನಿರ್ಮಾಣವಾದ ವಿಮಾನ ನಿಲ್ದಾಣದ ಉದ್ಘಾಟನೆಗೂ ಮುನ್ನ ರೈತರಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿದರು. ಮೊದಲು ರೈತರಿಗೆ ಪರಿಹಾರ ನೀಡಿ ನಂತರ ಉದ್ಘಾಟನೆ ಮಾಡಿ, ಇಲ್ಲವಾದಲ್ಲಿ ವಿಮಾನ ನಿಲ್ದಾಣದ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಮಾಧ್ಯಮಗೋಷ್ಟಿಯಲ್ಲಿ ಜಿಲ್ಲಾ ಕಾಂಗ್ರೆಸ್ನ ಹಲವು ಮುಖಂಡರು ಉಪಸ್ಥಿತರಿದ್ದರು.
ಇದನ್ನೂ ಓದಿ: ಸರ್ಕಾರಿ ಗೌರವದೊಂದಿಗೆ ಅರಣ್ಯ ರಕ್ಷಕ ಸುಂದರೇಶ್ ಅಂತ್ಯಸಂಸ್ಕಾರ