ಶಿವಮೊಗ್ಗ:ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರೇ ಅಪರಾಧಿಗಳಾಗಿದ್ದರೂ ಶಿಕ್ಷೆ ಅನುಭವಿಸಲೇಬೇಕು ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದರು.
ಶಿವಮೊಗ್ಗ ತಾಲೂಕಿನ ಹುಣಸೋಡು ಗ್ರಾಮದ ಬಳಿ ಕಲ್ಲುಕ್ವಾರಿಯಲ್ಲಿ ಸ್ಫೋಟಗೊಂಡ ಸ್ಥಳ ಪರಿಶೀಲಿಸಿದ ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಮೊನ್ನೆ ರಾತ್ರಿ ಈ ದುರ್ಘಟನೆ ನಡೆದಿದೆ. ಘಟನೆಯಲ್ಲಿ ಆರು ಜನ ಮೃತಪಟ್ಟಿದ್ದಾರೆ. ಹೈದರಾಬಾದ್ನಿಂದ ಆಗಮಿಸಿದ ತಂಡ ಪ್ರಾಥಮಿಕ ತನಿಖೆ ಮಾಡಿದೆ. ಶಿವಮೊಗ್ಗ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗಳು ತನಿಖೆ ನಡೆಸುತ್ತಿವೆ. ಒಟ್ಟಾರೆ ಘಟನೆಯಲ್ಲಿ ಸ್ಫೋಟಕದ ಮಾರಾಟ ಮತ್ತು ಬಳಕೆ ಆಯಾಮದಲ್ಲಿ ತನಿಖೆ ಮಾಡಬೇಕಿದೆ ಎಂದು ಹೇಳಿದರು.
ಈಗಾಗಲೇ ಮೃತ ಕುಟುಂಬಗಳಿಗೆ ಐದು ಲಕ್ಷ ಪರಿಹಾರವನ್ನು ಘೋಷಣೆ ಮಾಡಲಾಗಿದೆ. ಇಲ್ಲಿ ಸುತ್ತಮುತ್ತಲಿರುವ ಎಲ್ಲಾ ಕ್ರಷರ್ಗಳಿಗೂ ಸರ್ಕಾರದ ಅನುಮತಿ ಇದೆ. ಆದರೆ ಕ್ವಾರೆಯಲ್ಲಿ ಕಲ್ಲು ಗಣಿಗಾರಿಕೆ ಮಾಡಲು ಯಾರಿಗೂ ಅನುಮತಿ ಇಲ್ಲ. ಎಕೋ ಸೆನ್ಸಿಟಿವ್ ಝೋನ್ ಆಗಿರುವುದರಿಂದ ಇದನ್ನು ಮರುಪರಿಶೀಲನೆ ಮಾಡಬೇಕು ಎಂದು ಸರ್ಕಾರಕ್ಕೆ ಮನವಿ ಬಂದಿದೆ. ಹಾಗಾಗಿ ಮರುಪರಿಶೀಲನೆ ಮಾಡುತ್ತೇವೆ. ಸಮಗ್ರ ತನಿಖೆ ಆದ ನಂತರ ವಾಸ್ತವ ಸ್ಥಿತಿ ಗೊತ್ತಾಗುತ್ತದೆ ಎಂದರು.
ಈ ಘಟನೆ ನಡೆದಾಗ ಮೃತರಾದವರನ್ನು ಬಿಟ್ಟು ಯಾರೂ ಇರಲಿಲ್ಲ, ಹಾಗಾಗಿ ತನಿಖೆಯಿಂದಲೇ ಎಲ್ಲಾ ಸತ್ಯಾಸತ್ಯತೆಗಳು ಸ್ಪಷ್ಟವಾಗಬೇಕಿವೆ. ಹಾಗಾಗಿ ಏನೇ ಮಾತನಾಡಿದರೂ ತನಿಖೆಗೆ ಅಡ್ಡಿ ಆಗಬಹುದು ಎಂದರು. ಯಾರೇ ಅಪರಾಧಿಗಳಾಗಿದ್ದರೂ ಸಹ ಅವರು ಶಿಕ್ಷೆ ಅನುಭವಿಸಲೇಬೇಕುಮ ಅವರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.