ಶಿವಮೊಗ್ಗ: ರಾಜ್ಯದಲ್ಲಿ ಬಿಜೆಪಿ ಹೆಮ್ಮರವಾಗಿ ಬೆಳೆದಿದೆ. ಈ ಪಕ್ಷವನ್ನು ಇನ್ನಷ್ಟು ಸಧೃಢವಾಗಿ ಮಾಡಲು ಕಾರ್ಯಕರ್ತರು ಪ್ರಮಾಣಿಕ ಪ್ರಯತ್ನ ಮಾಡಬೇಕಾಗುತ್ತದೆ ಎಂದು ಜಿಲ್ಲಾ ಬಿಜೆಪಿ ಕಾರ್ಯಕರ್ತರಿಗೆ ಸಿಎಂ ಯಡಿಯೂರಪ್ಪ ಕರೆ ನೀಡಿದ್ದಾರೆ.
ಇಂದು ಶಿಕಾರಿಪುರದ ಮಂಗಳ ಭವನದಲ್ಲಿ ನಡೆದ ಬಿಜೆಪಿಯ ಜಿಲ್ಲಾ ಕಾರ್ಯಕಾರಣಿ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ದೇಶದಲ್ಲಿ ಪ್ರಧಾನಿ ನೇತೃತ್ವದಲ್ಲಿ ಬೇರೆ ಪಕ್ಷಗಳು ನಗಣ್ಯವಾಗಿವೆ. ಮುಂದಿನ ಚುನಾವಣೆಯಲ್ಲಿ ಮೋದಿಯವರೇ ಅಧಿಕಾರಕ್ಕೆ ಬಮದು ದೇಶದ ಆಡಳಿತ ನಡೆಸಬೇಕು ಎಂಬುದು ದೇಶ ಜನತೆಯ ಹಾಗೂ ನಮ್ಮ- ನಿಮ್ಮ ಆಶಯವಾಗಿದೆ ಎಂದರು.
ನಮ್ಮ ಸಂಘಟನೆಯ ಬಲದ ಆಧಾರದ ಮೇಲೆ ಒಳ್ಳೆಯ ಯುವಕ - ಯುವತಿಯರನ್ನು ಗುರುತಿಸಿ, ಅವರ ಮೂಲಕ ಪಕ್ಷವನ್ನುಸಂಘಟನೆ ಮಾಡುವ ಕಾರ್ಯ ನಡೆಯುತ್ತಿದೆ, ನಡೆಯಬೇಕಿದೆ. ಒಂದು ಊರಿನಲ್ಲಿ ಬಿಜೆಪಿಯ ಮನೆಗಳು ಎಷ್ಟು ಅಂತ ಗುರುತಿಸುವ ಕಾರ್ಯ ಮಾಡಬೇಕಿದೆ ಎಂದು ಸಲಹೆ ನೀಡಿದರು.
ಯುವ ಮೋರ್ಚಾ, ಮಹಿಳಾ ಮೋರ್ಚಾ, ಎಸ್ಟಿ, ಎಸ್ಸಿ ಹಾಗೂ ರೈತ ಮೋರ್ಚಾ ಬೆಳೆಯಬೇಕು. ಇದರಿಂದ ಸಂಘಟನೆಗಳು ಬಲವಾಗಬೇಕಿದೆ. ಈ ಎಲ್ಲಾ ಮೋರ್ಚಾಗಳನ್ನು ಬಲಪಡಿಸಬೇಕಿದೆ ಎಂದು ಕರೆ ನೀಡಿದರು.
![cm yadiyurappa speaks on bjp](https://etvbharatimages.akamaized.net/etvbharat/prod-images/bjp-distkaryakarine_20102020152752_2010f_1603187872_24.jpg)
ಸರ್ಕಾರದ ಯೋಜನೆಯನ್ನು ಮಧ್ಯವರ್ತಿಗಳ ಹಾವಳಿಯಿಂದ ತಪ್ಪಿಸಿ ತಲುಪಿಸುವ ಜವಾಬ್ದಾರಿ ಕಾರ್ಯಕರ್ತರು ಮಾಡಬೇಕಿದೆ ಎಂದರು. ಈ ವೇಳೆ ರಾಜ್ಯ ಬಿಜೆಪಿ ಕಾರ್ಯದರ್ಶಿ ಅರುಣ್ ಕುಮಾರ್, ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಗಿರೀಶ್ ಪಟೇಲ್ ಸೇರಿದಂತೆ ಇತರರು ಹಾಜರಿದ್ದರು.