ಬೆಂಗಳೂರು: ಕೊರೊನಾ ನಂತರ ತವರು ಜಿಲ್ಲೆ ಶಿವಮೊಗ್ಗಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೊದಲ ಬಾರಿಗೆ ಭೇಟಿ ನೀಡುತ್ತಿದ್ದು, ಎರಡು ದಿನಗಳ ಕಾಲ ವಾಸ್ತವ್ಯ ಹೂಡಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.
ಅಕ್ಟೋಬರ್ 19ರಂದು ಜಿಲ್ಲೆಗೆ ತೆರಳಲಿರುವ ಸಿಎಂ ಸ್ಥಳೀಯ ನಾಯಕರನ್ನು ಭೇಟಿಯಾಗಲಿದ್ದಾರೆ. ಅಂದು ರಾತ್ರಿ ವಿನೋಬನಗರದ ನಿವಾಸದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಅಕ್ಟೋಬರ್ 20ರಂದು ವಿವಿಧ ಕಾರ್ಯಕ್ರಮದಲ್ಲಿ ಭಾಗಿಯಾಗಿ ನಂತರ ಸ್ವಕ್ಷೇತ್ರ ಶಿಕಾರಿಪುರಕ್ಕೆ ತೆರಳಲಿದ್ದಾರೆ.
ಕಾರ್ಯಕರ್ತರ ಕುಂದು ಕೊರತೆ ಆಲಿಸಲು ಆ ದಿನ ರಾತ್ರಿ ಶಿಕಾರಿಪುರದಲ್ಲೇ ವಾಸ್ತವ್ಯ ಮಾಡಲಿದ್ದಾರೆ. ಮರುದಿನ ಅಕ್ಟೋಬರ್ 21ರಂದು ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ.
2020ರ ಜನವರಿ 29ರಂದು ತವರು ಜಿಲ್ಲೆ ಶಿವಮೊಗ್ಗಕ್ಕೆ ಸಿಎಂ ಕೊನೆಯ ಬಾರಿಗೆ ಭೇಟಿ ನೀಡಿದ್ದರು. ಕೊರೊನಾ ನಂತರ ಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸುವ ಕಾರ್ಯಕ್ರಮ ನಿಗದಿಯಾಗಿತ್ತಾದರೂ ಕಡೆಯ ಕ್ಷಣದಲ್ಲಿ ಪ್ರವಾಸ ರದ್ದುಪಡಿಸಲಾಗಿತ್ತು.
ಶಿವಮೊಗ್ಗ ವಿಮಾನ ನಿಲ್ದಾಣದ ಗುದ್ದಲಿ ಪೂಜೆ ಕಾರ್ಯಕ್ರಮಕ್ಕೂ ಗೃಹ ಕಚೇರಿ ಕೃಷ್ಣಾದಿಂದಲೇ ಆನ್ಲೈನ್ ಮೂಲಕ ಅವರು ಚಾಲನೆ ನೀಡಿದ್ದರು.
ನೆರೆ ವೀಕ್ಷಣೆ, ಬಾಗಿನ ಅರ್ಪಿಸಲು ಕೆಲ ಜಿಲ್ಲೆಗಳಿಗೆ ಭೇಟಿ ನೀಡಿದ್ದ ಸಿಎಂ ತವರು ಜಿಲ್ಲೆಗೆ ಭೇಟಿ ನೀಡಿರಲಿಲ್ಲ.