ಶಿವಮೊಗ್ಗ: ಮೊದಲು ದೇಶ, ನಂತರ ಪಾರ್ಟಿ ಎಂಬ ಧ್ಯೇಯ ಹೊಂದಿರುವ ಪಾರ್ಟಿ ಎಂದರೆ ಅದು ಬಿಜೆಪಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಶಿವಮೊಗ್ಗ ಹೊರವಲಯದ ಕಿಮ್ಮನೆ ಗಾಲ್ಫ್ ರೆಸಾರ್ಟ್ನಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿರುವ ಬಿಜೆಪಿಯ ರಾಜ್ಯ ಪ್ರಶಿಕ್ಷಣ ವರ್ಗದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಬಿಜೆಪಿ ಅಂದ್ರೆ, ಪಾರ್ಟಿ ವಿತ್ ಡಿಫರನ್ಸ್. ಬಿಜೆಪಿ ಪ್ರಪಂಚದಲ್ಲಿಯೇ ಅತಿ ಹೆಚ್ಚು ಕಾರ್ಯಕರ್ತರನ್ನು ಹೊಂದಿರುವ ಪಾರ್ಟಿಯಾಗಿದೆ. ಬಿಜೆಪಿ ಪಕ್ಷ ಸಿದ್ದಾಂತ, ಮೌಲ್ಯಗಳಿಗೆ ಕಾಂಪ್ರಮೈಸ್ ಆಗೊಲ್ಲ ಎಂದರು.
ಬಿಜೆಪಿ ರಾಜಕೀಯ ಪಕ್ಷಗಳು ಭಿನ್ನ ಅಭಿಪ್ರಾಯ ಹೊಂದಿವೆ. ಅವೆಲ್ಲವೂ ರಾಜಕೀಯ ದೃಷ್ಟಿಕೋನದಿಂದ ಹೊಂದಿರುವುದು. ಆದರೆ, ಬಿಜೆಪಿ ಬಗ್ಗೆ ಅಪಪ್ರಚಾರ ನಡೆಸಲಾಗುತ್ತಿದೆ. ಜನರಿಗೆ ಬಿಜೆಪಿ ಬಗ್ಗೆ ಉತ್ತಮ ಅಭಿಪ್ರಾಯವಿದೆ. ಸಂವಿಧಾನದ ಆಶಯ ಈಡೇರಿಸುವುದು ಬಿಜೆಪಿಯ ಆದ್ಯತೆ ಆಗಿದೆ. ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಹೇಗೆ ನಡೆದುಕೊಂಡಿತ್ತು ಎಂಬುದು ಈಗ ಇತಿಹಾಸ. ಈಗ ಕಾಂಗ್ರೆಸ್ ಅಂಬೇಡ್ಕರ್ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿದೆ ಎಂದರು.
ಉಜ್ವಲ ಯೋಜನೆ ಜಾರಿಗೆ ತಂದಿದೆ: ಕಾಂಗ್ರೆಸ್ಗೆ ಅಧಿಕಾರವೇ ಮಖ್ಯವಾಗಿತ್ತು. ಕಾಂಗ್ರೆಸ್ ತನ್ನ ಸಿದ್ದಾಂತ, ನೀತಿಗೆ ಅಂಟಿಕೊಂಡ ರಾಜಕಾರಣ ಮಾಡಿಲ್ಲ. ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ಅನೇಕ ಜನಪರ ಕೆಲಸ ಮಾಡಿದೆ. ನರೇಂದ್ರ ಮೋದಿ ಸರ್ಕಾರ ಕೂಡ ಉಜ್ವಲ ಯೋಜನೆ ಜಾರಿ ತಂದಿದೆ. ಈಗ ಪ್ರತಿ ಮನೆಗೆ ಶುದ್ಧನೀರು ಪೂರೈಸಲಾಗುತ್ತಿದೆ ಎಂದು ಹೇಳಿದರು.
ಕೋವಿಡ್ ನಿರ್ವಹಣೆಯಲ್ಲಿ ಯಶಸ್ವಿ: ಜಗತ್ತಿನ ಎಲ್ಲ ರಾಷ್ಟ್ರಗಳಲ್ಲಿ ಆರ್ಥಿಕ ಹಿಂಜರಿತ ಇದೆ. ಆದರೆ, ಭಾರತ ಜಿಡಿಪಿಯಲ್ಲಿ ನಿಯಂತ್ರಣ ಹೊಂದಿದೆ. ಜಿಡಿಪಿ ದರದಲ್ಲಿ ಶೇ 7 ರಷ್ಟು ಬೆಳವಣಿಗೆ ಕಾಣುತ್ತಿದೆ. ಆರ್ಥಿಕವಾಗಿ ಭಾರತ ಪ್ರಗತಿ ಸಾಧಿಸುತ್ತಿದೆ. ಮೋದಿ ಸರ್ಕಾರದ ದಾರಿಯಲ್ಲಿ ರಾಜ್ಯ ಸರ್ಕಾರ ಸಾಗುತ್ತಿದೆ. ಕೋವಿಡ್ ನಿರ್ವಹಣೆಯಲ್ಲಿ ಯಶಸ್ವಿಯಾಗಿದ್ದೇವೆ. ಯಡಿಯೂರಪ್ಪ ಅವರು ಮಾದರಿ ನಿರ್ವಹಣೆ ಮಾಡಿ ತೋರಿಸಿದ್ದಾರೆ ಎಂದರು.
ಶಿಕ್ಷಣ ಪಡೆಯುವುದು ಕಾಂಗ್ರೆಸ್ಗೆ ಇಷ್ಟವಿಲ್ಲ: ಸಿಎಂ ಆಗಿದ್ದಾಗ ತೆರಿಗೆ ನಿರ್ವಹಣೆಯಲ್ಲಿ ಹಿನ್ನಡೆಯಿತ್ತು. ಈಗ ಗುರಿ ಮೀರಿ ತೆರಿಗೆ ಸಂಗ್ರಹಣೆ ಆಗಿದೆ. ಬೃಹತ್ ಯೋಜನೆಗಳನ್ನು ಅನುಷ್ಠಾನ ಮಾಡಲಾಗುತ್ತಿದೆ. ಸಂವಿಧಾನ ನಂಬಿಕೆ ಇಲ್ಲ ಎನ್ನುತ್ತಿದ್ದ ಪಕ್ಷಕ್ಕೆ ಆತ್ಮಾವಲೋಕನ ಮಾಡುವ ಅವಶ್ಯಕತೆ ಇದೆ. ಕಾಂಗ್ರೆಸ್ ನವರು ಇದು ಸಾಧ್ಯವಿಲ್ಲ ಅದು ಅದು ಸಾಧ್ಯ ಇಲ್ಲ ಎಂದು ಹೇಳುತ್ತಿದ್ದಾರೆ.
ಕಾಂಗ್ರೆಸ್ನವರು ದಾಸ್ಯ ಸಂಸ್ಕೃತಿ ಉಳ್ಳವರು. ತಾವೂ ಮಾಡುವುದಿಲ್ಲ, ಬೇರೆಯವರಿಗೂ ಮಾಡಲು ಬಿಡುವುದಿಲ್ಲ ಎಂದರು. ಶಿಕ್ಷಣ ಪಡೆಯುವುದು ಕಾಂಗ್ರೆಸ್ ಗೆ ಇಷ್ಟವಿಲ್ಲ. ಅವರಿಗೆ ಉಳಿದವರು ದಾಸ್ಯದಲ್ಲೇ ಇರಬೇಕು ಎನ್ನುವ ಮನಸ್ಥಿತಿ ಕಾಂಗ್ರೆಸ್ ನಲ್ಲಿದೆ ಎಂದರು.
ಅಧಿಕಾರಕ್ಕೆ ಬಂದ್ರೆ ಕಾಂಗ್ರೆಸ್ ಧೂಳೀಪಟ: ಇದಕ್ಕೂ ಮುನ್ನ ಪ್ರಶಿಕ್ಷಣ ವರ್ಗವನ್ನು ಉದ್ಘಾಟಿಸಿ, ಮಾತನಾಡಿದ ಮಾಜಿ ಸಿಎಂ ಯಡಿಯೂರಪ್ಪನವರು, ವಿಧಾನಸಭಾ ಚುನಾವಣೆ ಕೇವಲ ಐದಾರು ತಿಂಗಳು ಮಾತ್ರ ಇದೆ. ಬರುವಂತಹ ಚುನಾವಣೆಯಲ್ಲಿ ನಾವು 140 ಸ್ಥಾನ ಪಡೆದು ಅಧಿಕಾರಕ್ಕೆ ಬಂದ್ರೆ ಕಾಂಗ್ರೆಸ್ ದೂಳೀಪಟ ಆಗಲಿದೆ. ಅದಕ್ಕೆ ಬೇಕಾದ ಪರಿಶ್ರಮ ಈಗಿಂದಲೇ ಹಾಕಬೇಕು ಎಂದು ಹೇಳಿದರು.
ನಾವು ಎಲ್ಲ ಕಡೆ ಗಮನ ಕೊಟ್ಟಾಗ ಮಾತ್ರ ಗುರಿ ಮುಟ್ಟಲು ಸಾಧ್ಯ. ಚುನಾವಣಾ ದೃಷ್ಟಿಯಿಂದ ನಮ್ಮ ತಯಾರಿ, ಸಂಘಟನೆ ದೃಷ್ಟಿಯಿಂದ ತಯಾರಿ. ವಾಸ್ತವಿಕವಾಗಿ ನಮ್ಮ ಸ್ಥಿತಿ ಏನಿದೆ. ಬೇರೆ ಪಕ್ಷಗಳ ಸ್ಥಿತಿ ಏನಿದೆ? ಎಂಬ ಬಗ್ಗೆ ಗಮನ ಹರಿಸಬೇಕು. ಪ್ರಧಾನಮಂತ್ರಿಗಳು, ಗೃಹ ಸಚಿವರು, ರಾಷ್ಟ್ರೀಯ ಅಧ್ಯಕ್ಷರು ಹೆಚ್ಚು ಬಾರಿ ರಾಜ್ಯಕ್ಕೆ ಬರಲಿದ್ದಾರೆ ಎಂದರು.
ಕೃಷಿ ಯಂತ್ರದಲ್ಲಿ ಸಬ್ಸಿಡಿ: ದಕ್ಷಿಣ ಭಾರತದಲ್ಲಿ ಬಿಜೆಪಿ ಸರ್ಕಾರ ಉಳಿಸಿಕೊಳ್ಳಬೇಕಿದೆ. ವಿಶೇಷ ಗಮನ ಕೊಟ್ಟಾಗ ಮಾತ್ರ ಗುರಿ ತಲುಪಲು ಸಾಧ್ಯ. ಕೇಂದ್ರ ಸರ್ಕಾರದ ಕಾರ್ಯಕ್ರಮಗಳು ನಮಗೆ ಬೆನ್ನೆಲುಬು ಆಗಿವೆ. ಕೃಷಿ ಯಂತ್ರದಲ್ಲಿ ಸಬ್ಸಿಡಿ ನೀಡಲಾಗುತ್ತಿದೆ. ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಅವರಲ್ಲಿ ನಾಯಕತ್ವ ಇಲ್ಲದೇ ಗೊಂದಲದಲ್ಲಿದ್ದಾರೆ. ಈಗಾಗಲೇ ತಾನು ಮುಖ್ಯಮಂತ್ರಿ, ತಾನು ಮುಖ್ಯಮಂತ್ರಿ ಅಂತಾ ಹಲವರು ತಿರುಕನ ಕನಸು ಕಾಣ್ತಿದ್ದಾರೆ. ಚುನಾವಣೆ ನಂತರ ಸಿದ್ದರಾಮಯ್ಯ ಅಡ್ರಸ್ ಇಲ್ಲದಂತಾಗುತ್ತಾರೆ ಎಂದರು. 140 - 150 ಸ್ಥಾನ ಗೆದ್ದು ಬಿಜೆಪಿ ಅಧಿಕಾರಕ್ಕೆ ತರುವ ದಿಕ್ಕಿನಲ್ಲಿ ಸಂಕಲ್ಪ ಮಾಡೋಣ ಎಂದರು.
ಓದಿ: ಒಂದೇ ದಿನದೊಳಗೆ ಮಹಿಳಾ ಆಯೋಗದ ದೂರುಗಳ ತನಿಖೆ ಪ್ರಾರಂಭ: ಸಿಎಂ ಬೊಮ್ಮಾಯಿ