ಶಿವಮೊಗ್ಗ: ಸಿಗಂದೂರು ಚೌಡೇಶ್ವರಿ ದೇವಿ ನಾವು ಪ್ರತಿಷ್ಠಾಪಿಸಿದ ನಮ್ಮ ಮನೆ ದೇವರು, ನಮಗೆ ನಮ್ಮ ದೇವಿಯ ವಿಗ್ರಹವನ್ನು ನೀಡಿ ಎಂದು ಸೊರಬ ತಾಲೂಕು ಹೊಳೆಕೊಪ್ಪದ ನಿವಾಸಿ ನಾರಾಯಣಪ್ಪ ಎಂಬುವರು ವಿಚಿತ್ರ ಬೇಡಿಕೆ ಇಟ್ಟಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿಗಂದೂರು ಚೌಡೇಶ್ವರಿ ದೇವರ ಮೂಲ ವಂಶಸ್ಥರು ನಾವು. ದೇವಿಯನ್ನು ಪ್ರತಿಷ್ಠಾಪಿಸಿದವರು ನಾವು, ನಮಗೆ ದೇವಿಯ ಮೇಲೆ ಹಕ್ಕಿದೆ. ಹಾಗಾಗಿ, ಚೌಡೇಶ್ವರಿ ದೇವಿಯನ್ನು ನಮಗೆ ನೀಡಿ, ನೀವು ನಿಮ್ಮ ದೇವಾಲಯ ಇಟ್ಟುಕೊಳ್ಳಿ ಎಂದು ನಾರಾಯಣಪ್ಪ ಆಗ್ರಹಿಸಿದ್ದಾರೆ.
ದೇವಾಲಯದ ಒಡೆತನಕ್ಕೆ ಧರ್ಮದರ್ಶಿ ಹಾಗೂ ಅರ್ಚಕರ ನಡುವೆ ತಿಕ್ಕಾಟ ನಡೆಯುತ್ತಿರುವ ಸಂದರ್ಭದಲ್ಲಿ ಹೊಳೆಕೊಪ್ಪದ ನಾರಾಯಣಪ್ಪ ದೇವಿಯ ಮೂಲ ವಂಶಸ್ಥರು ನಾವು ಎಂದು ಈಗ ಧ್ವನಿ ಎತ್ತಿದ್ದಾರೆ. ಹಿಂದೆ ಮುಳುಗಡೆಯಾದ ಸಿಗಂದೂರಿನಲ್ಲಿ ದೇವಿಯ ವಿಗ್ರಹವನ್ನು ಪ್ರತಿಷ್ಠಾಪಿಸಿ ನಮ್ಮ ಅಜ್ಜ ಜಟ್ಟನಾಯ್ಕ ಪೂಜೆ ಮಾಡುತ್ತಿದ್ದರು. ಇವರ ಪತ್ನಿ ಅಪ್ಪಾಣಿ ಚೌಡಮ್ಮ ದೇವಿಯನ್ನು ಪೂಜೆ ಮಾಡುತ್ತಿದ್ದರು.
ಇವರ ಮಗ ಜಟ್ಟನಾಯ್ಕ ಅಲಿಯಾಸ್ ಗುಂಡನಾಯ್ಕ ಇವರು ಸಣ್ಣ ವಯಸ್ಸಿನಲ್ಲಿ ದೇವಿಯ ಪೂಜೆ ಮಾಡಿಕೊಂಡು ಬರುತ್ತಿದ್ದರು. ನಂತರ ನಮ್ಮ ತಂದೆ ಸಣ್ಣವರಿದ್ದು, ಇವರು ವಯಸ್ಸಿಗೆ ಬರುವ ತನಕ ಸಿಗಂದೂರು ಬಳಿಯ ಹಕ್ಕಲು ಮನೆಯ ಶೇಷ ನಾಯ್ಕರವರಿಗೆ ಗುಡಿ ಉಸ್ತುವಾರಿಯನ್ನು ನೋಡಿಕೊಂಡು ಬರುವಂತೆ ಒಪ್ಪಿಸಿದ್ದರು. ಇದಕ್ಕೆ ಶೇಷನಾಯ್ಕ ಸಹ ಒಪ್ಪಿಗೆ ನೀಡಿದ್ದರು. ನಂತರ ದೇವಿಯ ಪ್ರಚಾರಕ್ಕೆ ಬಂದು ಭಕ್ತರು ಹೆಚ್ಚಾಗಿ ಕಾಣಿಕೆ ಚೆನ್ನಾಗಿ ಬರಲು ಪ್ರಾರಂಭಿಸಿತು. ಶೇಷನಾಯ್ಕ ದೇವಾಲಯದಲ್ಲಿ ಬಂದ ಆದಾಯವನ್ನು ಅಪ್ಪಾಣಿ ಚೌಡಮ್ಮನವರಿಗೆ ನೀಡುತ್ತಿದ್ದರು.
ಆ ನಂತರದಲ್ಲಿ ಶೇಷನಾಯ್ಕರು ಮರಣ ಹೊಂದಿದರು. 70 ರ ದಶಕದಲ್ಲಿ ಲಿಂಗನಮಕ್ಕಿ ಅಣೆಕಟ್ಟೆ ಕಟ್ಟಿದ ಪರಿಣಾಮ ನಾವು ವಾಸವಿದ್ದ ಪ್ರದೇಶ ಮುಳುಗಡೆ ಆಯಿತು. ಸರ್ಕಾರ ನೀಡಿದ ಸೊರಬದ ಹೊಳೆಕೊಪ್ಪ ಗ್ರಾಮಕ್ಕೆ ನಾವು ಬಂದು ನೆಲೆಸುವಂತೆ ಆಯಿತು. ನಂತರ ಮುಳುಗಡೆಯಾದ ದೇವಿಯನ್ನು ತಂದು ಸಿಗಂದೂರಿನಲ್ಲಿ ನಮ್ಮ ತಂದೆ ಹಾಗೂ ಶೇಷನಾಯ್ಕರ ಮಗ ರಾಮಪ್ಪ ಸಣ್ಣ ಗುಡಿ ಕಟ್ಟಿ ಪ್ರತಿಷ್ಠಾಪಿಸಿದರು.
ನಂತರ ದೇವಾಲಯದ ಹಣ ದುರುಪಯೋಗ ಹಾಗೂ ದೇವಿಯ ಒಡವೆ ಕದ್ದಿದ್ದಾರೆ ಎಂದು ಆರೋಪಿಸಿ, ನಮ್ಮ ತಂದೆಯ ಮೇಲೆ ಹಲ್ಲೆ ನಡೆಸಿ, ಅಲ್ಲಿಗೆ ಹೋಗದಂತೆ ಮಾಡಿದರು. ಇದರಿಂದ ನಮ್ಮ ತಂದೆ ಹೊಳೆಕೊಪ್ಪದಲ್ಲಿಯೇ ದೇವಿಯ ಬೇರೆ ಮೂರ್ತಿ ಸ್ಥಾಪಿಸಿ ಪೂಜೆ ಸಲ್ಲಿಸುತ್ತಿದ್ದಾರೆ. ನಮ್ಮದು ಸಿಗಂದೂರು ದೇವಿ ವಂಶಸ್ಥ ಕುಟುಂಬ. ನಮಗೆ ರಾಮಪ್ಪನವರು ಕಟ್ಟಿದ ಗುಡಿ ಬೇಡ. ನಮಗೆ ನಮ್ಮ ದೇವಿಯ ವಿಗ್ರಹ ನೀಡಿ ಎಂದು ಬೇಡಿಕೊಂಡಿದ್ದಾರೆ.