ಶಿವಮೊಗ್ಗ: ಕಾಂಗ್ರೆಸ್ ಗುತ್ತಿಗೆದಾರ ಪುಡಾರಿಗಳು ಕಾಮಗಾರಿ ಮಾಡಿ ಬಿಲ್ ನೀಡುತ್ತಿಲ್ಲ ಎಂದು ಬೇಕಾಬಿಟ್ಟಿಯಾಗಿ 40 ಪರ್ಸೆಂಟ್ ಕಮಿಷನ್ ಆರೋಪ ಮಾಡುತ್ತ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಆರೋಪಿಸಿದರು.
ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಜಿಲ್ಲಾ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರ 'ಭಾರತ್ ಜೋಡೋ ಯಾತ್ರೆ' ಪಿಕ್ನಿಕ್ನಂತಾಗಿದೆ. ಮನಮೋಹನ್ ಸಿಂಗ್ ಅವರು ಪ್ರಧಾನ ಮಂತ್ರಿಯಾಗಿದ್ದಾಗ ಲಕ್ಷಾಂತರ ಕೋಟಿ ರೂ. ಭ್ರಷಾಚಾರ ಆಗಿತ್ತು. ಅದರ ಬಗ್ಗೆ ಈಗ ಮಾತನಾಡುತ್ತಿಲ್ಲ ಎಂದು ಹರಿಹಾಯ್ದರು.
ಕೇಂದ್ರ ಸರ್ಕಾರ ಕೊಟ್ಟ ಅಕ್ಕಿಗೆ ಸಿದ್ದರಾಮಯ್ಯ ತಮ್ಮ ಫೋಟೋ ಹಾಕಿ ಪ್ರಚಾರ ಪಡೆದಿದ್ದು, ಬಿಟ್ಟರೆ ಬೇರೆ ಏನೂ ಮಾಡಿಲ್ಲ. ಈಗ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ, ಡಿಕೆಶಿ ಬಗ್ಗೆ ತಲೆಕೆಡಿಸಿಕೊಳ್ಳಬೇಕಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಕಾರ್ಯಕರ್ತರು ಜನರ ಮನೆಗೆ ತಲುಪಿಸುವ ಮೂಲಕ ಜನರ ವಿಶ್ವಾಸ ಪಡೆದು ಪಕ್ಷವನ್ನು ಪುನಃ ಅಧಿಕಾರಕ್ಕೆ ತರಲು ಪ್ರಯತ್ನಿಸಬೇಕು. ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ, ಕೇಂದ್ರದಲ್ಲಿ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿ ಆಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ನಾಯಕರು ಏನೇ ಟೀಕೆ ಮಾಡಿದರೂ ಪ್ರಜ್ಞಾವಂತ ಮತದಾರರಿಗೆ ಬಿಜೆಪಿ ಬಗ್ಗೆ ಗೊತ್ತಿದೆ. ಉತ್ತರ ಪ್ರದೇಶ, ಗೋವಾದಲ್ಲಿ ಬಿಜೆಪಿ ಮತ್ತೊಮ್ಮೆ ಬರುವುದಿಲ್ಲ ಎಂದು ಶತಾಯಗತಾಯ ಪ್ರಚಾರ ಮಾಡಲಾಗಿತ್ತು. ಆದರೆ, ಮತದಾರರು ಕೈಹಿಡಿದಿದ್ದಾರೆ. ಸಮೀಕ್ಷೆಗಳೆಲ್ಲ ತಲೆಕೆಳಗಾಗಿವೆ. ಅದೇ ಸ್ಥಿತಿ ಕರ್ನಾಟಕದಲ್ಲೂ ಆಗಲಿದೆ ಎಂದು ಹೇಳಿದರು.
ಕೋವಿಡ್ ಸಂದರ್ಭವನ್ನು ಪ್ರಧಾನಿ ಮೋದಿ ಅವರು ಸಮರ್ಥವಾಗಿ ನಿಭಾಯಿಸಿದ್ದಾರೆ. ಆರೋಗ್ಯ, ಪ್ರವಾಸೋದ್ಯಮವನ್ನು ಚೇತರಿಸಿಕೊಳ್ಳುವಂತೆ ಮಾಡಿದ್ದಾರೆ. ವಿಶ್ವದ ಕೆಲವು ರಾಷ್ಟ್ರಗಳು ಆರ್ಥಿಕವಾಗಿ ದುಸ್ಥಿತಿಗೆ ಹೋಗಿದ್ದು, ನಾಯಕರು ಅಧಿಕಾರ ಕಳೆದುಕೊಳ್ಳುವಂತಾಗಿದೆ. ಆದರೆ, ಭಾರತಕ್ಕೆ ಮೋದಿ ಅವರ ಸಮರ್ಥ ನಾಯಕತ್ವದಿಂದ ಯಾವುದೇ ಹೆಚ್ಚಿನ ಅನಾಹುತವಾಗಿಲ್ಲ. ರಾಜ್ಯದಲ್ಲಿ ಯಡಿಯೂರಪ್ಪ ಕೂಡ ಆ ಸಂದರ್ಭವನ್ನು ಸಮರ್ಥವಾಗಿ ಎದುರಿಸಿದ್ದಾರೆ. ನೋಂದಾಯಿತ ಕಾರ್ಮಿಕರ ಖಾತೆಗಳಿಗೆ ಹಣ ಹಾಕುವ ಮೂಲಕ ನೆರವಿನ ಹಸ್ತ ಚಾಚಿದ್ದರು ಎಂದು ಹೇಳಿದರು.
ನಿರುದ್ಯೋಗದ ಬಗ್ಗೆ ಮಾತನಾಡುವ ಕಾಂಗ್ರೆಸಿಗರಿಗೆ ಒಂದು ವರ್ಷದಿಂದ ತಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಸ್ಥಾನ ಖಾಲಿ ಇರುವುದು ಕಾಣುತ್ತಿಲ್ಲ ಎಂದು ಲೇವಡಿ ಮಾಡಿದರು. ಜೀಸಸ್ ಬಗ್ಗೆ ಜಾರ್ಜ್ ಪೊನ್ನಯ್ಯ ಅವರ ಬಳಿ ಕೇಳುವ ಬದಲು ರಾಹುಲ್ ಅವರು ಅವರ ತಾಯಿ ಸೋನಿಯಾ ಗಾಂಧಿಯವರ ಬಳಿ ಕೇಳಿದ್ದರೆ ಇನ್ನೂ ಚೆನ್ನಾಗಿ ಹೇಳುತ್ತಿದ್ದರು ಎಂದು ವ್ಯಂಗ್ಯವಾಡಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ವಿಭಾಗ ಪ್ರಭಾರಿ ಗಿರೀಶ್ ಪಟೇಲ್, ಜಿಲ್ಲಾ ಪ್ರಭಾರಿ ಮೋನಪ್ಪ ಭಂಡಾರಿ, ವಿಭಾಗ ಸಹ ಪ್ರಭಾರಿ ಎನ್.ಎಸ್. ಹೆಗಡೆ, ಆರ್.ಡಿ ಹೆಗಡೆ ಉಪಸ್ಥಿತರಿದ್ದರು.
ಇದನ್ನೂ ಓದಿ: ಜನಸ್ಪಂದನ ಕಾರ್ಯಕ್ರಮದ ಯಶಸ್ಸು ನೋಡಿ ಕಾಂಗ್ರೆಸ್ ವಿಚಲಿತ: ವಿಜಯೇಂದ್ರ