ಶಿವಮೊಗ್ಗ: ಉನ್ನತ ಮಟ್ಟದ ರೈಲ್ವೆ ಅಧಿಕಾರಿಗಳೊಂದಿಗೆ ಸಭೆಯ ನಡೆಸಿದ ಸಂಸದ ಬಿ.ವೈ ರಾಘವೇಂದ್ರ ಜಿಲ್ಲಾ ರೈಲ್ವೆ ನಿಲ್ದಾಣ ನೀಡಬೇಕಾದ ಸೌಲಭ್ಯ ಹಾಗೂ ಇನ್ನಿತರ ಪ್ರಮುಖ ಅಂಶಗಳ ಬಗ್ಗೆ ಚರ್ಚಿಸಿ, ಸಭೆಯ ಬಳಿಕ ಹಿರಿಯ ಅಧಿಕಾರಿಗಳೊಂದಿಗೆ ರೈಲ್ವೆ ನಿಲ್ದಾಣವನ್ನು ವೀಕ್ಷಿಸಿದರು.
ನಂತರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈಲ್ವೆ ನಿಲ್ದಾಣ ನೀಡಬೇಕಾದ ಸೌಲಭ್ಯ ಕುರಿತು ಅಧಿಕಾರಿಗಳೊಂದಿಗೆ ಸಾಕಷ್ಟು ಚರ್ಚೆಗಳಾಗಿವೆ. ರೈಲ್ವೆ ಸಚಿವ ಸುರೇಶ್ ಅಂಗಡಿ ಅವರಿಗೆ ಮನವಿ ಮಾಡಿದಂತೆ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳ ತಂಡ ಇಂದು ಆಗಮಿಸಿ ಸಮಸ್ಯೆಗಳನ್ನು ಗಮನಿಸಿದ್ದಾರೆ. ಇಷ್ಟುದಿನ ರೈಲ್ವೇ ಸರ್ವಿಸ್ಗೆ ಹಾಗೂ ಏನೇ ರೈಲ್ವೆ ಸಮಸ್ಯೆಗಳಾದರೂ ಬೆಂಗಳೂರಿಗೆ ಹೋಗಬೇಕಿತ್ತು. ಆದರೆ ಇಂದು ಅಧಿಕಾರಿಗಳು ತಾಳಗುಪ್ಪ ಭೇಟಿ ನೀಡಿ ಪರಿಶೀಲಿಸಿದ್ದು, ರೈಲ್ವೆ ಟರ್ಮಿನಲ್ ತಾಳಗುಪ್ಪದಲ್ಲಿ ನಿರ್ಮಿಸಲು ತೀರ್ಮಾನ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ರೈಲ್ವೇ ಸರ್ವಿಸ್ ಹಾಗೂ ಇತರೆ ಎಲ್ಲವೂ ಕೂಡ ಆಗಲಿದೆ ಎಂದು ತಿಳಿಸಿದರು.
ಶಿವಮೊಗ್ಗ ನಗರದ ರಿಂಗ್ ರೋಡ್ ಕಾಮಗಾರಿ ಪೂರ್ಣಗೊಂಡಿರಲಿಲ್ಲ. ಆದರೆ ಇವತ್ತು ರೈಲ್ವೆ ಅಧಿಕಾರಿಗಳು ರೈಲ್ವೆ ನಿಲ್ದಾಣದ ಬಳಿಯಿರುವ ಜಾಗವನ್ನು ಬಿಟ್ಟುಕೊಡುವುದಾಗಿ ತಿಳಿಸಿದ್ದಾರೆ. ಇದರಿಂದ ರಿಂಗ್ರೋಡ್ ಮಾಡಲು ಇದ್ದ ಸಮಸ್ಯೆ ಬಗೆಹರಿದಂತಾಗಿದೆ.
ಹಾಗೆಯೇ ಶಿವಮೊಗ್ಗದಿಂದ ತಿರುಪತಿ ಹಾಗೂ ಚೆನ್ನೈಗೆ ರೈಲು ಬಿಡಲು ಮನವಿ ಮಾಡಿದ್ದೇನೆ. ಚಿತ್ರದುರ್ಗ, ಶಿವಮೊಗ್ಗ ರೈಲ್ವೆ ಓವರ್ ಬ್ರಿಡ್ಜ್ ಹಾಗೂ ರಾತ್ರಿ ಹೊರಡುವ ರೈಲಿಗೆ ಎಸಿ ಕೋಚ್ಗಳನ್ನು ನೀಡಲು ಮನವಿ ಮಾಡಿಕೊಳ್ಳಲಾಗಿದೆ. ರೈಲ್ವೆ ನಿಲ್ದಾಣದ ಮೂಲಭೂತ ಸೌಕರ್ಯಗಳ ಬಗ್ಗೆ ಸಹ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ ಎಂದು ತಿಳಿಸಿದರು.