ಶಿವಮೊಗ್ಗ: ಕೊರೊನಾದಿಂದಾಗಿ ಸತತ 50 ದಿನಗಳವರೆಗೆ ಹೇರಿದ ಲಾಕ್ಡೌನ್ ನಿಂದ ವ್ಯಾಪಾರ ವಹಿವಾಟುಗಳು ನೆಲಕಚ್ಚಿವೆ. ಅಂಗಡಿಗಳನ್ನು ತೆರೆಯಲಾರದೇ, ವ್ಯಾಪಾರ ವಹಿವಾಟು ನಡೆಸಲಾಗದೇ ವ್ಯಾಪಾರಸ್ಥರು ಸುಸ್ತಾಗಿ ಹೋಗಿದ್ದಾರೆ.
ವಾಣಿಜ್ಯ ಕೇಂದ್ರ ಗಾಂಧಿ ಬಜಾರ್ನಲ್ಲಿ ವ್ಯಾಪಾರ ನೀರಸ: ಶಿವಮೊಗ್ಗದ ವಾಣಿಜ್ಯ ಕೇಂದ್ರ ನಗರದ ಗಾಂಧಿ ಬಜಾರ್. ಇಲ್ಲಿ ದಿನಸಿ, ಬಟ್ಟೆ, ಆಭರಣ ಮಳಿಗೆ, ತರಕಾರಿ, ಹೂ,ಹಣ್ಣು ಸೇರಿದಂತೆ ಎಲ್ಲ ರೀತಿಯ ವಸ್ತುಗಳು ಲಭ್ಯವಾಗುತ್ತವೆ. ಇಂತಹ ಕಡೆ ಹೆಚ್ಚಿನ ಜನ ಸಂದಣಿಯಾಗುತ್ತದೆ ಎಂದು ಜಿಲ್ಲಾಡಳಿತ ಇಲ್ಲಿ ಯಾವುದೇ ವ್ಯಾಪಾರ ವಹಿವಾಟು ನಡೆಯದಂತೆ ನೋಡಿಕೊಂಡಿತ್ತು. ಇಲ್ಲಿ ಹೋಲ್ ಸೇಲ್ ವ್ಯಾಪಾರ ನಡೆಯುವುದರಿಂದ ಜಿಲ್ಲೆಯ ಬಹುತೇಕ ಸಣ್ಣ ವ್ಯಾಪಾರಿಗಳು ಇಲ್ಲಿಂದಲೇ ಖರೀದಿ ಮಾಡುತ್ತಾರೆ. ಆದರೆ, ಇಲ್ಲೆ ಅಂಗಡಿಗಳು ಬಂದ್ ಆಗಿದ್ದರಿಂದ ಬೇರೆ ಕಡೆ ವ್ಯಾಪಾರವೇ ಇಲ್ಲದಂತೆ ಆಗಿತ್ತು. ಕೋಟ್ಯಂತರ ರೂಪಾಯಿ ವಹಿವಾಟು ನಡೆಸುವ ಗಾಂಧಿ ಬಜಾರ್ ಈಗ ವ್ಯಾಪಾರವಿಲ್ಲದೆ ಬಣಗುಡುತ್ತಿದೆ.
ಲಾಕ್ಡೌನ್ ಸಡಿಲಿಕೆಯ ನಂತರ ಇಲ್ಲಿ ಎಡ ಬಲದಂತೆ ವ್ಯಾಪಾರಕ್ಕೆ ಅನುವು ಮಾಡಿ ಕೊಡಲಾಗುತ್ತಿತ್ತು. ಆದರೆ, ಇದೀಗ ಎಂದಿನಂತೆ ವ್ಯಾಪಾರ ನಡೆಸಲು ಅವಕಾಶ ಮಾಡಿ ಕೊಟ್ಟಿದ್ದರೂ ಸಂಜೆ 5 ಗಂಟೆಗೆ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಲಾಗುತ್ತಿದೆ. ಗಾಂಧಿ ಬಜಾರ್ಗೆ ತಾಲೂಕು ಹಾಗೂ ಗ್ರಾಮಾಂತರ ಭಾಗದಿಂದ ಜನ ವ್ಯಾಪಾರಕ್ಕೆ ಬರುವುದು ಮಧ್ಯಾಹ್ನದ ಮೇಲೆಯೇ. ಇದರಿಂದ ಅಂಗಡಿ ತೆರೆಯುವುದು, ಮುಚ್ಚುವುದೇ ಕೆಲಸವಾಗಿದೆ. ಆದರೆ, ಸಂಜೆ ವೇಳೆಗೆ ಅಂಗಡಿಗಳನ್ನು ಬಂದ್ ಮಾಡಿಸುತ್ತಿರುವುದರಿಂದ ಮುಂಚೆಯಷ್ಟು ವ್ಯಾಪಾರ ನಡೆಯುತ್ತಿಲ್ಲ. ಮುಂಚೆಯಷ್ಟು ವ್ಯಾಪಾರ ನಡೆಯಬೇಕು ಎಂದರೆ ಕನಿಷ್ಟ 6 ತಿಂಗಳಿಂದ 1 ವರ್ಷ ಬೇಕಾಗುತ್ತದೆ ಎನ್ನುತ್ತಾರೆ ದಿನಸಿ ಹೋಲ್ ಸೇಲ್ ವ್ಯಾಪಾರಿಗಳು.
ಇನ್ನು ಲಾಕ್ಡೌನ್ ಸಡಿಲಿಕೆಯ ನಂತರ ಉತ್ತಮ ವ್ಯಾಪಾರದ ನಿರೀಕ್ಷೆಯಲ್ಲಿದ್ದ ವ್ಯಾಪಾರಸ್ಥರಿಗೆ ಈಗ ಆಘಾತವಾಗಿದೆ. ಒಂದು ತರಿಸಿದ್ದ ಮಾಲು ಖಾಲಿಯಾಗಿದ್ರೆ, ಇನ್ನೂ ಕೆಲವು ಹಾಳಾಗಿ ಹೋಗಿದೆ. ಮತ್ತೊಂದು ಕಡೆ ಜನ ಸಹ ಶಿವಮೊಗ್ಗ ನಗರಕ್ಕೆ ಬರಲು ಹೆದರುತ್ತಿದ್ದಾರೆ. ಶಿವಮೊಗ್ಗದಲ್ಲಿ ಪತ್ತೆಯಾದ ಕೊರೊನಾ ಪಾಸಿಟಿವ್ ಪ್ರಕರಣ ಜನರನ್ನು ಸಿಟಿಯತ್ತ ಮುಖ ಮಾಡದಂತೆ ಮಾಡಿದೆ. ಸಿಟಿಗೆ ಬರುವುದಕ್ಕೆ ನಮಗೆ ಭಯವಾಗುತ್ತದೆ ಎನ್ನುತ್ತಾರೆ ಹರಿಗೆ ನಿವಾಸಿ ರಮೇಶ್. ಒಟ್ಟಾರೆ, ವ್ಯಾಪಾರ ಮಾಡುವವರು ಇಲ್ಲದೇ ಅಂಗಡಿಗಳು ಖಾಲಿ ಖಾಲಿಯಾಗಿ ಕಾಣುತ್ತಿವೆ.