ಶಿವಮೊಗ್ಗ: ಸಿಎಂ ಬಿ.ಎಸ್.ಯಡಿಯೂರಪ್ಪ ಪ್ರತಿನಿಧಿಸುವ ಶಿಕಾರಿಪುರ ಪುರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವಿನ ನಗೆ ಬಿರಿದ್ದಾರೆ.
ಶಿಕಾರಿಪುರ ಪುರಸಭೆಯು 23 ಜನ ಸದಸ್ಯರನ್ನು ಒಳಗೊಂಡಿದೆ. 2019ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ- 8, ಕಾಂಗ್ರೆಸ್-12 ಹಾಗೂ ಪಕ್ಷೇತರರು-3 ಜನ ಆಯ್ಕೆಯಾಗಿದ್ದರು. ಇದರಲ್ಲಿ ಮೂರು ಜನ ಪಕ್ಷೇತರರು ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಕಾಂಗ್ರೆಸ್ನ ಮೂವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಪಕ್ಷೇತರರು ಬಿಜೆಪಿಗೆ ಸೇರ್ಪಡೆಯಾದ ಕಾರಣ ಬಿಜೆಪಿಯ ಸಂಖ್ಯೆ 11 ಕ್ಕೆ ಏರಿಕೆಯಾಗಿದೆ. ಒಂದು ಸಂಸದರ ಮತ ಸೇರಿ ಒಟ್ಟು 12 ಸದಸ್ಯರ ಬಲವನ್ನು ಬಿಜೆಪಿ ಹೊಂದಿದೆ. ಕಾಂಗ್ರೆಸ್ 9 ಸ್ಥಾನವನ್ನು ಹೊಂದಿದೆ.
ಇಂದು ನಡೆದ ಚುನಾವಣೆಗೆ ಬಿಜೆಪಿಯಿಂದ ಲಕ್ಷ್ಮಿ ಮಹಾಲಿಂಗಪ್ಪ ಹಾಗೂ ಮಹಮ್ಮದ್ ಸಾಧಿಕ್ ನಾಮಪತ್ರ ಸಲ್ಲಿಸಿದ್ದರು. ಅದೇ ರೀತಿ ಕಾಂಗ್ರೆಸ್ ನಿಂದ ಕಮಲಮ್ಮ ಹಾಗೂ ಮಹಮ್ಮದ್ ದಸ್ತಗಿರಿ ನಾಮಪತ್ರ ಸಲ್ಲಿಸಿದ್ದರು. ಚುನಾವಣೆಯ ವೇಳೆ ಕೈ ಎತ್ತುವ ಮೂಲಕ ಮತ ಎಣಿಕೆ ನಡೆಸಲಾಯಿತು. ಇದರಲ್ಲಿ ಬಿಜೆಪಿ ಅಧ್ಯಕ್ಷ ಸ್ಥಾನದ ಲಕ್ಷ್ಮಿ ಮಹಾಲಿಂಗಪ್ಪ ಪರವಾಗಿ 12 ಹಾಗೂ ಉಪಾಧ್ಯಕ್ಷ ಸ್ಥಾನದ ಮಹಮ್ಮದ್ ಸಾಧಿಕ್ ಗೆ 12 ಮತಗಳು ಬಿದ್ದವು. ಕಾಂಗ್ರೆಸ್ನ ಎರಡು ಅಭ್ಯರ್ಥಿಗಳ ಪರವಾಗಿ ತಲಾ 9 ಮತಗಳು ಬಿದ್ದವು.
ಇದರಿಂದ ಚುನಾವಣಾಧಿಕಾರಿ ಬಿಜೆಪಿಯ ಲಕ್ಷ್ಮಿ ಮಹಾಲಿಂಗಪ್ಪ ಅಧ್ಯಕ್ಷರನ್ನಾಗಿ ಹಾಗೂ ಮಹಮ್ಮದ್ ಸಾಧಿಕ್ರನ್ನು ಉಪಾಧ್ಯಕ್ಷರನ್ನಾಗಿ ಘೋಷಿಸಲಾಯಿತು. ಈ ವೇಳೆ ಸಂಸದರು ಗೆದ್ದ ಅಭ್ಯರ್ಥಿಗಳಿಗೆ ಹಾರ ಹಾಕಿ ಶುಭಾಶಯ ಕೋರಿದರು. ನಂತರ ಬಿಜೆಪಿ ಕಾರ್ಯಾಲಯದಲ್ಲಿ ಸಭೆ ನಡೆಸಲಾಯಿತು.
ಆಪರೇಷನ್ ಕಮಲದ ಮೂಲಕ ಸಂಸದ ರಾಘವೇಂದ್ರ ಶಿಕಾರಿಪುರದಲ್ಲಿ ಕಮಲ ಅರಳುವಂತೆ ಮಾಡಿದ್ದಾರೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ.