ಶಿವಮೊಗ್ಗ: ಭದ್ರಾ ಅಣೆಕಟ್ಟೆಯಿಂದ ಹೆಚ್ಚಿನ ನೀರು ಹೊರಗೆ ಬಿಟ್ಟ ಪರಿಣಾಮ ಭದ್ರಾವತಿಯ ಕವಲಗುಂದಿ, ಅಂಬೇಡ್ಕರ್ ನಗರ ಹಾಗೂ ಗುಂಡೂರಾವ್ ಕಾಲೋನಿಗಳು ಜಲಾವೃತಗೊಂಡಿದ್ದು, ಇಲ್ಲಿನ ಸುಮಾರು 30 ಕುಟಂಬದ 120 ಜನರನ್ನು ಸೇರಿದಂತೆ ಅವರ ಸಾಕು ಪ್ರಾಣಿಗಳಾದ ನಾಯಿ, ಕೋಳಿಯನ್ನು ರಕ್ಷಿಸಿ ಭದ್ರಾವತಿಯ ಕೆಂಪೇಗೌಡ ಸಮುದಾಯ ಭವನದ ಕಾಳಜಿ ಕೇಂದ್ರದಲ್ಲಿ ಇರಿಸಲಾಗಿದೆ.
ಉಪವಿಭಾಗಧಿಕಾರಿ ಪ್ರಕಾಶ್ ಮಾತನಾಡಿ, ಇಲ್ಲಿ ಇವರಿಗೆ ಊಟ, ತಿಂಡಿ ಸೇರಿದಂತೆ ಇತರೆ ವ್ಯವಸ್ಥೆ ಮಾಡಿ ಕೊಡಲಾಗಿದೆ. ನೀರು ಕಡಿಮೆಯಾದ ನಂತರ ಜನ ವಾಪಸ್ ಆಗಬಹುದು ಎಂದರು. ಭದ್ರಾವತಿಯ ಕಾಳಜಿ ಕೇಂದ್ರದಲ್ಲಿರುವವರು ಜಿಲ್ಲಾಡಳಿತ ಹಾಗೂ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಇನ್ನು ಪ್ರತಿ ವರ್ಷ ನದಿ ನೀರು ನಮ್ಮೂರಿಗೆ ನುಗ್ಗಿ ಬರುತ್ತಿದ್ದು, ನಮ್ಮನ್ನು ಕರೆದುಕೊಂಡು ಬಂದು ಕಾಳಜಿ ಕೇಂದ್ರಕ್ಕೆ ಬಿಡುತ್ತಾರೆ. ಇಲ್ಲಿ ನಮಗೆ ಇರುವ ತನಕ ಎಲ್ಲಾ ರೀತಿಯ ಸೌಕರ್ಯ ಕಲ್ಪಿಸಿ ಕೊಡುತ್ತಾರೆ. ಆದರೆ ನಮಗೆ ಮನೆಯನ್ನು ಸ್ಥಳಾಂತರ ಮಾಡಿ ಕೊಡಿ ಎಂದು ಮನವಿ ಮಾಡಿದ್ರು ಅದು ಪ್ರಯೋಜನವಾಗಿಲ್ಲ. ನಾವೆಲ್ಲಾ ಕೂಲಿ ಮಾಡಿ ಜೀವನ ನಡೆಸುವವರು. ನಮಗೆ ಸರಿಯಾದ ವ್ಯವಸ್ಥೆ ಕಲ್ಪಿಸಿಕೊಡಿ ಎಂದು ನಿರಾಶ್ರಿತರು ಆಕ್ರೋಶ ಹೊರ ಹಾಕಿದ್ದಾರೆ.