ಶಿವಮೊಗ್ಗ: ಸರ್ಕಾರದ ಸ್ವಾಯತ್ತ ಸಂಸ್ಥೆಗಳಾದ ಐಟಿ, ಇಡಿ, ಸಿಬಿಐ, ಐಬಿಯನ್ನು ಬಿಜೆಪಿ ತನ್ನ ಮುಂಚೂಣಿ ಘಟಕಗಳಂತೆ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಆಪಾದಿಸಿದರು.
ಶಿವಮೊಗ್ಗದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಬಂಧನ ಕುರಿತು ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಕ್ಷಕ್ಕೆ ಯಾರು ಸೇರ್ಪಡೆಯಾಗುವುದಿಲ್ಲವೋ ಅಂತಹ ನಾಯಕರ ಮೇಲೆ ಬಿಜೆಪಿ ತನ್ನ ಮುಂಚೂಣಿ ಘಟಕಗಳಾದ ಐಟಿ, ಇಡಿ, ಸಿಬಿಐ, ಐಬಿ ಸಂಸ್ಥೆಗಳನ್ನು ಬಳಸಿಕೊಂಡು ದಾಳಿ ನಡೆಸುತ್ತದೆ. ಈಗ ಆಗಿರುವುದು ಅದೇ ಎಂದರು.
ನಂತರ ಕರ್ನಾಟಕದ ಉಪ ಚುನಾವಣೆಯ ಬಗ್ಗೆ ಮಾತನಾಡಿದ ಅವರು, ಫಲಿತಾಂಶ ಹೇಳಲು ನಾನು ಜ್ಯೋತಿಷಿ ಅಲ್ಲ. ಚುನಾವಣೆಯಲ್ಲಿ ಮತದಾರ ಏನು ತೀರ್ಪು ನೀಡುತ್ತಾನೆ ಎನ್ನುವುದನ್ನು ಕಾದು ನೋಡಬೇಕು ಎಂದರು. ಯಡಿಯೂರಪ್ಪನವರ ಪುತ್ರರು ಹೊಸ ದಾಖಲೆ ಸೃಷ್ಟಿಸಿದ್ದಾರೆ. ಅದೇನೆಂದರೆ ಇಡೀ ಕರ್ನಾಟಕ ರಾಜ್ಯದ ಖಜಾನೆ ತಂದು ಶಿರಾದಲ್ಲಿ ಸುರಿದಿದ್ದಾರೆ. ನನ್ನ ನಲವತ್ತು ವರ್ಷಗಳ ರಾಜಕೀಯ ಇತಿಹಾಸದಲ್ಲಿ ಇಷ್ಟು ಹಣ ಖರ್ಚು ಮಾಡಿರುವುದನ್ನು ನೋಡಿಲ್ಲ ಎಂದು ಆರೋಪಿಸಿದರು.
ನಂತರ ಬಿಹಾರ ಚುನಾವಣೆ ಕುರಿತು ಮಾತನಾಡಿದ ಅವರು, ಬಿಹಾರ ಚುನಾವಣೆಯಲ್ಲಿ ತೇಜಸ್ವಿ ಯಾದವ್ ಅವರ ನೇತೃತ್ವದ ಮಹಾಘಟಬಂಧನ್ ಅಧಿಕಾರ ಹಿಡಿಯುವುದು ನಿಶ್ಚಿತ. ಒಂದು ವೇಳೆ ತೇಜಸ್ವಿ ಅವರಿಗೆ ಸ್ಪಷ್ಟ ಬಹುಮತವಿಲ್ಲದೆ ಅತಂತ್ರವಾದರೆ ಆಗ ಬಿ.ಎಸ್.ಯಡಿಯೂರಪ್ಪನವರೇ ಅಲ್ಲಿಗೆ ಹೋಗಬೇಕಾಗುತ್ತದೆ. ಯಾಕೆಂದರೆ ಅಲ್ಲಿಯೂ ಆಪರೇಷನ್ ಕಮಲ ಮಾಡಬಹುದು ಎಂದು ವ್ಯಂಗ್ಯವಾಡಿದರು.