ಶಿವಮೊಗ್ಗ: ಸಿಗಂದೂರು ದೇವಾಲಯದ ವಿಚಾರದಲ್ಲಿ ರಾಜ್ಯ ಸರ್ಕಾರ ತನ್ನ ಹಠಮಾರಿತನವನ್ನು ಬಿಡಬೇಕು. ಇಲ್ಲವಾದಲ್ಲಿ ಹೋರಾಟ ಅನಿವಾರ್ಯವಾಗುತ್ತದೆ ಎಂದು ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ಎಚ್ಚರಿಕೆ ನೀಡಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವಾಲಯಗಳ ವಿಚಾರದಲ್ಲಿ ಸರ್ಕಾರ ಕ್ರಮ ತೆಗೆದುಕೊಳ್ಳುವ ಮುನ್ನ ಯೋಚನೆ ಮಾಡಬೇಕಿತ್ತು. ದೇವಾಲಯದ ಉಳಿವಿಗಾಗಿ ಹೋರಾಟ ಅನಿವಾರ್ಯವಾಗಿದೆ. ಎರಡು ಮೂರು ದಿನದಲ್ಲಿ ಹೋರಾಟದ ದಿನಾಂಕ ನಿಗದಿ ಮಾಡುತ್ತೇವೆ ಎಂದರು.
ಸಾಗರ ಶಾಸಕ ಹರತಾಳು ಹಾಲಪ್ಪರಿಗೆ ಸಿಗಂದೂರು ಟ್ರಸ್ಟ್ ಸೇರಬೇಕೆಂಬ ಉದ್ದೇಶ ಇತ್ತು. ಈ ಮೊದಲು ಟ್ರಸ್ಟ್ಗೆ ಸೇರಿಕೊಳ್ಳಲು ಆಗಿರಲಿಲ್ಲ. ಈಗ ಹಿಂದುಳಿದ ವರ್ಗದವರ ದೇವಾಲಯ ತೆಗೆಯಲು ಹೊರಟಿದ್ದಾರೆ ಎಂದು ಆರೋಪಿಸಿದರು. ಬಿಜೆಪಿಯವರು ಧರ್ಮದ ಬಗ್ಗೆ ಮಾತನಾಡುವವರು. ದೇವಾಲಯದ ವಿಚಾರದಲ್ಲಿ ಯಾಕೆ ಕೈ ಹಾಕಿದರು ಎಂದು ಪ್ರಶ್ನೆ ಮಾಡಿದರು.
ಅಧಿಕಾರಿಗಳು ಏನು ಮಾಡುತ್ತಿದ್ರು?:
ಸಿಗಂದೂರು ದೇವಾಲಯದ ಸುತ್ತ ಅಭಿವೃದ್ಧಿ ನಡೆಸಲಾಗಿದ್ದು, ಅಲ್ಲಿ ಸರ್ಕಾರದ ವತಿಯಿಂದ ಯಾತ್ರಿ ನಿವಾಸ ನಿರ್ಮಾಣ ಮಾಡಲಾಗಿದೆ. ರಸ್ತೆ ನಿರ್ಮಾಣಕ್ಕೆ ಹಣ ನೀಡಲಾಗಿದೆ. ಇಷ್ಟೆಲ್ಲಾ ಅಭಿವೃದ್ಧಿಯಾಗುವಾಗ ಅರಣ್ಯಾಧಿಕಾರಿಗಳು ಏನು ಮಾಡುತ್ತಿದ್ದರು ಎಂದು ಬೇಳೂರು ಗೋಪಾಲಕೃಷ್ಣ ಗರಂ ಆದರು.
ಸಿಗಂದೂರು ಹೋರಾಟಕ್ಕೆ ಎಲ್ಲಾ ಸಮಾಜದವರು ಬೆಂಬಲ ನೀಡಿದ್ದಾರೆ. ಸರ್ಕಾರ ಒಂದು ಸಂಸ್ಥೆಯ ಮೇಲೆ ಹಠಮಾರಿತನದ ಧೋರಣೆ ತೋರುತ್ತಿರುವುದು ನೋಡಿದರೆ ಅನುಮಾನ ಬರುತ್ತದೆ ಎಂದರು.