ಶಿವಮೊಗ್ಗ: ತಮ್ಮ ಗ್ರಾಮದಲ್ಲಿ ಎಂಎಸ್ಐಎಲ್( MSIL) ಮದ್ಯದಂಗಡಿ ತೆರೆಯುವುದನ್ನು ವಿರೋಧಿಸಿ ಸಾಗರದ ಬೆಳ್ಳಿಕೊಪ್ಪ ಗ್ರಾಮದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.
ಡಿಎಸ್ಎಸ್ ಹಾಗೂ ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ಬೆಳ್ಳಿಕೊಪ್ಪ ಗ್ರಾಮದಿಂದ ಸಾಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ತಡೆದು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಇದರಿಂದ ರಸ್ತೆ ಸಂಚಾರ ಬಂದ್ ಆಗಿತ್ತು. ಗ್ರಾಮ ಪಂಚಾಯಿತಿ ಚುನಾವಣೆಗೂ ಮುನ್ನ ಮದ್ಯದಂಗಡಿ ತೆರೆಯಲು ಬಂದಾಗ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿ ಚುನಾವಣೆ ಬಹಿಷ್ಕಾರ ಮಾಡುವ ಬಗ್ಗೆ ಎಚ್ಚರಿಕೆ ನೀಡಿದ ನಂತರ ಮದ್ಯದಂಗಡಿ ತೆರೆಯುವುದಕ್ಕೆ ತಡೆ ಹಿಡಿದಿದ್ದರು.
ಇನ್ನು ಪ್ರತಿಭಟನಾನಿರತರನ್ನು ಪೊಲೀಸರು ಬಂಧಿಸಲು ಮುಂದಾದಾಗ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಬಳಿಕ ಖಾಕಿ ಪಡೆ ಪ್ರತಿಭಟನಾಕಾರರನ್ನು ಚದುರಿಸಿ ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸಿದರು.