ಶಿವಮೊಗ್ಗ: ಈಟಿವಿ ಭಾರತದ ವರದಿಯಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು ಅಪಘಾತ ಕೂಪವಾಗಿದ್ದ ಪುರಲೆ ಕೆರೆಗೆ ತಡೆಗೋಡೆ ನಿರ್ಮಾಣ ಮಾಡಿದ್ದಾರೆ.
ಮಂಗಳೂರು-ಸೋಲಾಪುರ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಈ ಕೆರೆ ಇದ್ದು, ಅವೆರಡರ ನಡುವೆ ತಡೆಗೋಡೆ ಇಲ್ಲದ ಹಿನ್ನೆಲೆಯಲ್ಲಿ ಸಾಕಷ್ಟು ಅಪಘಾತಗಳು ಸಂಭವಿಸುತ್ತಿದ್ದವು. ಈ ಹಿನ್ನಲೆಯಲ್ಲಿ ತಡೆಗೋಡೆ ನಿರ್ಮಾಣಕ್ಕಾಗಿ ಆಗ್ರಹಿಸಿ ಗ್ರಾಮಸ್ಥರು ಹಲವು ಬಾರಿ ಸರ್ಕಾರಿ ಕಚೇರಿ ಅಲೆದಿರುವುದುಂಟು. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ. ಇದನ್ನು ಗಮನಿಸಿದ ಈಟಿವಿ ಭಾರತ ಈ ಸಮಸ್ಯೆ ಕುರಿತು ವಿಸ್ತೃತ ವರದಿ ಪ್ರಕಟಿಸಿತ್ತು.
ಈ ರಸ್ತೆ ಮೂಲಕ ಶಿವಮೊಗ್ಗದಿಂದ ಚಿತ್ರದುರ್ಗಕ್ಕೆ ನಿತ್ಯ ಸಾಕಷ್ಟು ಬಸ್ಗಳು ಸಂಚರಿಸುತ್ತಿದ್ದವು. ಅಲ್ಲದೇ ಇದೇ ಭಾಗದಲ್ಲಿ ಶಾಲೆಗಳು, ಆಸ್ಪತ್ರೆಗಳಿದ್ದು ಹಲವಾರು ಮಂದಿ ಪ್ರಯಾಣ ಮಾಡುತ್ತಿರುತ್ತಾರೆ. ಆದರೆ, ಆ ರಸ್ತೆಯಲ್ಲಿದ್ದ ಕೆರೆಗೆ ತಡೆಗೋಡೆಯಿಲ್ಲದೇ ಇದ್ದುದ್ದರಿಂದ ಹಲವಾರು ಅಪಘಾತಗಳು ನಡೆದು ಹೋಗಿದ್ದವು. ಹೀಗಾಗಿ ಜನರು ಜೀವ ಕೈಯಲ್ಲಿ ಹಿಡಿದುಕೊಂಡೇ ಇಲ್ಲಿ ಪ್ರಯಾಣಿಸಬೇಕಿತ್ತು.
ಎಷ್ಟೋ ಬಾರಿ ಕಾರು, ದ್ವಿಚಕ್ರ ವಾಹನಗಳು ಕೆರೆಗೆ ನುಗ್ಗಿದ ನಿದರ್ಶನಗಳಿವೆ. ಇತ್ತೀಚೆಗೆ ಹೊಳಲ್ಕೆರೆಯಿಂದ ಎನ್.ಆರ್.ಪುರಕ್ಕೆ ಹೊರಟಿದ್ದ ಕುಟುಂಬದ ಕಾರೊಂದು ಕೆರೆಗೆ ಇಳಿದಿತ್ತು. ಆದರೆ ಅದೃಷ್ಟವಶಾತ್ ಗ್ರಾಮಸ್ಥರ ಸಮಯ ಪ್ರಜ್ಞೆಯಿಂದ ಯಾವುದೇ ಜೀವ ಹಾನಿಯಾಗಿರಲಿಲ್ಲ.
ಈ ಹಿನ್ನೆಲೆಯಲ್ಲಿ ಗ್ರಾಮಸ್ಥರೇ ಒಂದು ಹೆಜ್ಜೆ ಮುಂದಿಟ್ಟು ಕೆರೆಗೆ ತಡೆಗೋಡೆ ಕಟ್ಟಿ ಅಪಘಾತಗಳನ್ನು ನಿಯಂತ್ರಿಸಬೇಕು ಎಂದು ಆಗ್ರಹಿಸಿ ಸರ್ಕಾರಿ ಕಚೇರಿಗಳನ್ನು ಅಲೆದಿದ್ದಾರೆ. ಆದರೆ, ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕ್ಯಾರೆ ಅನ್ನಲಿಲ್ಲ.
ಇದೀಗ ಈಟಿವಿ ಭಾರತದ ವರದಿಯಿಂದ ಎಚ್ಚೆತ್ತ ಅಧಿಕಾರಿಗಳು, ಪುರಲೆ ಕೆರೆಗೆ ತಡೆಗೋಡೆಯನ್ನು ನಿರ್ಮಾಣ ಮಾಡಿದ್ದಾರೆ. ಇದಕ್ಕೆ ಪುರಲೆ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದು, ಸಹಕಾರ ನೀಡಿದ ಈಟಿವಿ ಭಾರತಕ್ಕೆ ಅಭಿನಂದನೆ ತಿಳಿಸಿದ್ದಾರೆ.